
ಬಾರ್ಬಡೋಸ್, ಜೂನ್ 21: ಚೆಂಡು ವಿರೂಪ ಪ್ರಕರಣದಲ್ಲಿ ತಮ್ಮ ಮೇಲೆ ಹೇರಲಾಗಿರುವ ಒಂದು ಟೆಸ್ಟ್ ಪಂದ್ಯದ ನಿಷೇಧ ಹಾಗೂ ದಂಡದ ಶಿಕ್ಷೆಯ ವಿರುದ್ಧ ಶ್ರೀಲಂಕಾ ನಾಯಕ ದಿನೇಶ ಚಂಡಿಮಾಲ್ ಮನವಿ ಸಲ್ಲಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೆಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಲೆಗೆ ಚಂಡಿಮಾಲ್ ಅವರು ಬಾಲ್‌ಗೆ ಸಿಹಿ ಪದಾರ್ಥ ಅಂಟಿಸಿ ವಿರೂಪಗೊಳಿಸಲು ಪ್ರಯತ್ನಿಸಿದ್ದು ವಿಡಿಯೋ ದೃಶ್ಯಾವಳಿಗಳಿಂದ ಸಾಬೀತಾಗಿತ್ತು. ಹೀಗಾಗಿ ರೆಫರಿ ಜಾವಗಲ್ ಶ್ರೀನಾಥ್ ಅವರು ಚಂಡಿಮಾಲ್‌ಗೆ ಒಂದು ಟೆಸ್ಟ್ ಪಂದ್ಯದ ನಿಷೇಧ ವಿಧಿಸಿದ್ದರು.
ಐಸಿಸಿ ನೀತಿ ಸಂಹಿತೆಯಡಿಯಲ್ಲಿ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿ ಚಂಡಿಮಾಲ್ ಅವರು ಕಾನೂನಿನ ಮೊರೆ ಹೋಗಿದ್ದಾರೆ.
ಇದರಿಂದ ಶ್ರೀಲಂಕಾ ವಕೀಲರು ಮತ್ತು ಐಸಿಸಿ ವಕೀಲರ ನಡುವೆ ನಡೆಯಲಿರುವ ವಾದ ವಿವಾದ ಕುತೂಹಲ ಕೆರಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವಾಡಲು ಬಾರ್ಬಡೋಸ್‌ನಲ್ಲಿರುವ ಶ್ರೀಲಂಕಾ ತಂಡ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬುಧವಾರ ಆರೋಪದ ವಿರುದ್ಧ ಮನವಿ ಸಲ್ಲಿಸಲು ನಿರ್ಧರಿಸಿತು.
ಚಂಡಿಮಾಲ್ ಅವರಲ್ಲದೆ ತಂಡದ ಕೋಚ್ ಹತುರಸಿಂಘ ಮತ್ತು ಮ್ಯಾನೇಜರ್ ಗುರುಸಿನ್ಹ ಅವರನ್ನೂ ತಪ್ಪಿತಸ್ಥರು ಎಂದು ತೀರ್ಮಾನಿಸಲಾಗಿತ್ತು.
ಈಗ ಐಸಿಸಿ ಈ ಪ್ರಕರಣದ ವಿಚಾರಣೆಗೆ ನ್ಯಾಯಾಂಗ ಕಮಿಷನರ್ ಅವರನ್ನು ನೇಮಿಸಬೇಕಿರುವುದರಿಂದ ಮೂರನೆಯ ಪಂದ್ಯದಲ್ಲಿ ಚಂಡಿಮಾಲ್, ಹತುರಸಿಂಘ ಮತ್ತು ಗುರುಸಿನ್ಹ ಅವರ ಮೇಲಿನ ನಿಷೇಧವು ಜಾರಿಯಾಗುವುದಿಲ್ಲ.
ಬಾರ್ಬಡೋಸ್‌ನಲ್ಲಿ ಶನಿವಾರ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಚಂಡಿಮಾಲ್ ಆಡಲಿದ್ದಾರೆ.
ಹೀಗಾಗಿ ಒಂದು ವೇಳೆ ಚಂಡಿಮಾಲ್ ಅವರ ವಿರುದ್ಧದ ನಿಷೇಧವನ್ನು ನ್ಯಾಯಾಂಗ ಕಮಿಷನರ್ ಎತ್ತಿಹಿಡಿದರೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಸರಣಿಯ ಪಂದ್ಯದಲ್ಲಿ ಅನ್ವಯವಾಗಬಹುದು.
ಮೂರನೇ ಹಂತದ ಅಪರಾಧವು ಎರಡು ಅಥವಾ ನಾಲ್ಕು ಟೆಸ್ಟ್ ಪಂದ್ಯದ ನಿಷೇಧವನ್ನು ಒಳಗೊಳ್ಳುವ ಸಾಧ್ಯತೆ ಇದೆ.