
87 ಎಸೆತಗಳಲ್ಲಿ ಶತಕ ಬಾರಿಸಿದ ಶುಭ್ಮನ್ ಗಿಲ್
ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್, ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. ಮೊದಲು ಭಾರತ ತಂಡದ ನಾಯಕ 34 ರನ್‌ಗಳಿಗೆ ನಿರ್ಗಮಿಸಿದ ನಂತರ, ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಅವರೂ ಕೂಡ ವಿಕೆಟ್ ಒಪ್ಪಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.
ಪಂಜಾಬ್ ಮೂಲ್ ಯುವ ಬ್ಯಾಟರ್ ಕೇವಲ 87 ಎಸೆತಗಳಲ್ಲಿ ಮೂರಂಕಿ ತಲುಪಿದರು ಮತ್ತು ಆ ಸಮಯದಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡ ತಮ್ಮ ಮೂರನೇ ಶತಕ ಬಾರಿಸಿದರು.
ಶತಕದ ನಂತರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಎದುರಾಳಿ ತಂಡಕ್ಕೆ ಬೃಹತ್ ರನ್ ಟಾರ್ಗೆಟ್ ನೀಡಲು ಭಾರತಕ್ಕಾಗಿ ರನ್‌ಗಳನ್ನು ಪೇರಿಸಲು ಪ್ರಾರಂಭಿಸಿದರು.

ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಚೊಚ್ಚಲ ದ್ವಿಶತಕ ಚಚ್ಚಿದ ಗಿಲ್
ಕಿವೀಸ್‌ನ ಲಾಕಿ ಫರ್ಗುಸನ್ ವಿರುದ್ಧ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ದ್ವಿಶತಕ ಚಚ್ಚಿದರು. ಈ ವೇಳೆ ಹೈದರಾಬಾದ್ ಮೈದಾನದಲ್ಲಿನ ಅಭಿಮಾನಿಗಳು ಚಪ್ಪಾಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
ಶುಭ್ಮನ್ ಗಿಲ್ ಅಂತಿಮವಾಗಿ 149 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 208 ರನ್ ಗಳಿಸಿ ಔಟಾದರು. ಭಾರತ ನಿಗದಿತ 50 ಓವರ್‌ಗಳಲ್ಲಿ 349 ರನ್ ಗಳಿಸಿತು.

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ
ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ (19 ಇನ್ನಿಂಗ್ಸ್‌ಗಳಲ್ಲಿ) 1000 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮತ್ತು ವಿಶ್ವದ ಜಂಟಿ ಎರಡನೇ ವೇಗದ ಸಾಧನೆ ಮಾಡಿದರು. ಶುಭ್ಮನ್ ಗಿಲ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು.
ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್, ರವಿಚಂದ್ರನ್ ಅಶ್ವಿನ್ ಮತ್ತು ವೀರೇಂದ್ರ ಸೆಹ್ವಾಗ್ ಅವರುಗಳು ಶುಭ್ಮನ್ ಗಿಲ್‌ರನ್ನು ಪ್ರಶಂಸಿಸಿದರು.
|
ನನಗೆ ಮತ್ತು ಶುಭ್ಮನ್ ತಂದೆಗೆ ತುಂಬಾ ಹೆಮ್ಮೆಯ ದಿನ
ಮಾಜಿ ಎಡಗೈ ಆಟಗಾರ ಯುವರಾಜ್ ಸಿಂಗ್ ಟ್ವೀಟ್ ಮಾಡಿ, "ಏಕದಿನ ಕ್ರಿಕೆಟ್‌ನಲ್ಲಿ 200 ರನ್!! ಇಷ್ಟು ಚಿಕ್ಕ ವಯಸ್ಸಿನಲ್ಲಿ ನಂಬಲಸಾಧ್ಯವಾದ ಸಾಧನೆ!! ನನಗೆ ಮತ್ತು ಶುಭ್ಮನ್ ತಂದೆಗೆ ತುಂಬಾ ಹೆಮ್ಮೆಯ ದಿನ. ಅಭಿನಂದನೆಗಳು ಶುಭ್ಮನ್ ಗಿಲ್. ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ,'' ಎಂದು ಬರೆದುಕೊಂಡಿದ್ದಾರೆ.
|
ನಿಮ್ಮ ಇನ್ನಿಂಗ್ಸ್ ಅನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ
"ಅದ್ಭುತ ಬ್ಯಾಟಿಂಗ್. ಗಿಲ್ ಸ್ವಲ್ಪ ಸಮಯದ ನಂತರ ಒಂದೆರಡು ಇನ್ನಿಂಗ್ಸ್‌ಗಳಲ್ಲಿ ವಿಫಲವಾಗಬಹುದು. ಆದರೆ, ಇಂದಿನ ನಿಮ್ಮ ಇನ್ನಿಂಗ್ಸ್ ಅನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ," ಎಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.
"ವ್ಹಾವ್ ಶುಭಮನ್ ಗಿಲ್. ದ್ವಿಶತಕ ಅದ್ಭುತ," ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.