ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಫ್ಘಾನಿಸ್ತಾನಕ್ಕೆ ಪಾದಾರ್ಪಣೆಯ ಪಂದ್ಯ: ಭಾರತಕ್ಕೂ ಪರೀಕ್ಷೆ

ಬೆಂಗಳೂರು, ಜೂನ್ 13: ಏಕದಿನ ಮತ್ತು ಟಿ 20 ಕ್ರಿಕೆಟ್ ಪಂದ್ಯಗಳಲ್ಲಿ ಛಾಪು ಮೂಡಿಸಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತಂಡದ ಐತಿಹಾಸಿಕ ಕ್ಷಣಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ತನ್ನ ಕ್ರಿಕೆಟ್ ಜೀವನದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಫ್ಘಾನಿಸ್ತಾನ ತಂಡ ಭಾರತದ ಎದುರು ಆಡಲಿದೆ.

ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಆಫ್ಘನ್ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಭಾರತದ ನೆಲದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟಿ 20 ಸರಣಿಯಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿರುವ ಆಫ್ಘಾನಿಸ್ತಾನ, ಈಗಾಗಲೇ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಪ್ರತಿಭೆಗಳಿದ್ದರೂ ಆಫ್ಘಾನಿಸ್ತಾನಕ್ಕೆ ಟೆಸ್ಟ್ ಕ್ರಿಕೆಟ್‌ನ ಅನುಭವದ ಕೊರತೆ ಇದೆ. ಆದರೆ, ತನ್ನ ಎಂದಿನ ಆಕ್ರಮಣಾಕಾರಿ ಶೈಲಿಯಲ್ಲಿ ಆಡಿದರೆ ಅದು ಭಾರತಕ್ಕೆ ಆಘಾತ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ.

ಅಜಿಂಕ್ಯ ರಹಾನೆ ಸಾರಥ್ಯ

ಅಜಿಂಕ್ಯ ರಹಾನೆ ಸಾರಥ್ಯ

ಗುರುವಾರದಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಆಡುತ್ತಿದೆ.

ಸ್ಪಿನ್ ಬೌಲಿಂಗ್‌ನಲ್ಲಿ ಬಹಳ ಶಕ್ತವಾಗಿರುವುದಾಗಿ ಅನೇಕ ಪಂದ್ಯಗಳಲ್ಲಿ ಸಾಬೀತುಪಡಿಸಿರುವ ಆಫ್ಘಾನಿಸ್ತಾನ ತಂಡದ ಕ್ರಿಕೆಟ್ ಸಾಮರ್ಥ್ಯವನ್ನು ಈ ಪಂದ್ಯ ಪರೀಕ್ಷೆಗೆ ಒಡ್ಡಲಿದೆ. ಆದರೆ, ಭಾರತ ತಂಡಕ್ಕೂ ಇದು ಸವಾಲಿನ ಪಂದ್ಯವಾಗಲಿದೆ.

ವಿರಾಟ್ ಕೊಹ್ಲಿ ಪಂದ್ಯದಲ್ಲಿ ಆಡದೆ ಇದ್ದರೂ, ಆಫ್ಘಾನಿಸ್ತಾನದ ಬೌಲಿಂಗ್ ಹಾಗೂ ಬ್ಯಾಟಿಂಗ್ ಸಾಮರ್ಥ್ಯವನ್ನು ಕಂಡಿರುವ ಭಾರತ, ಅನುಭವಿಗಳನ್ನೇ ಕಣಕ್ಕಿಳಿಸುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ಗೆ ಪೂರಕವಾಗಿದ್ದರೂ, ಅನಿರೀಕ್ಷಿತ ತಿರುವುಗಳನ್ನು ನೀಡುವುದಕ್ಕೆ ಹೆಸರುವಾಸಿ. ಹೀಗಾಗಿ ಆಫ್ಘನ್ ಸ್ಪಿನ್ನರ್‌ಗಳನ್ನು ಎದುರಿಸುವುದು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಷ್ಟು ಸುಲಭವಲ್ಲ.

ಆಫ್ಘನ್ ಬಳಿ ಸ್ಪಿನ್ ಅಸ್ತ್ರ

ಆಫ್ಘನ್ ಬಳಿ ಸ್ಪಿನ್ ಅಸ್ತ್ರ

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಬೌಲಿಂಗ್‌ಗೆ ಅಗಾಧ ವ್ಯತ್ಯಾಸವಿದೆ. ಏಕದಿನದಲ್ಲಿ ಯಶಸ್ವಿಯಾದ ಬೌಲರ್‌ಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಯಶಸ್ಸು ಗಳಿಸುತ್ತಾರೆ ಎನ್ನುವಂತಿಲ್ಲ.

ಆದರೆ, ಆಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್‌ಗಳಾದ ರಶೀದ್ ಖಾನ್, ನಬಿ ಖಾನ್, ಮುಜೀಬ್ ಉರ್ ರೆಹಮಾನ್ ಮಾತ್ರವಲ್ಲ, ಅಮೀರ್ ಹಮ್ಜಾ, ಜಹೀರ್ ಖಾನ್, ಜಾವೇದ್ ಅಹ್ಮದಿ ಕೂಡ ಚೆಂಡನ್ನು ತಿರುಗಿಸುವುದರಲ್ಲಿ ಪರಿಣತರಾಗಿದ್ದಾರೆ. ಹೀಗಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟಕ್ಕೆ ಮೊರೆ ಹೋಗುವುದು ಅನಿವಾರ್ಯ.

ನಾಯಕ ಅಸ್ಘರ್ ಸ್ಟಾನಿಕ್‌ಜೈ, ವಿಕೆಟ್ ಕೀಪರ್ ಮೊಹಮದ್ ಷಹಜಾದ್, ಜಾವೇದ್ ಅಹ್ಮದಿ, ರಹಮತ್ ಶಾ, ನಾಸಿರ್ ಜಮಾಲ್ ಮುಂತಾದವರು ಬ್ಯಾಟಿಂಗ್‌ನಲ್ಲಿ ಭಾರತದ ಬೌಲರ್‌ಗಳನ್ನು ಕಾಡಬಹುದು.

ರಹಾನೆ ಬ್ಯಾಟಿಂಗ್ ವೈಫಲ್ಯ

ರಹಾನೆ ಬ್ಯಾಟಿಂಗ್ ವೈಫಲ್ಯ

ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ, ಅನನುಭವಿಗಳ ತಂಡ ಎಂದು ಎದುರಾಳಿಗಳನ್ನು ಕಡೆಗಣಿಸುವ ಸ್ಥಿತಿಯಲ್ಲಿಲ್ಲ. ನಾಯಕರಾಗಿ ಹಾಗೂ ಬ್ಯಾಟ್ಸ್‌ಮನ್‌ ಆಗಿ ರಹಾನೆ ಮೇಲಿನ ಹೊಣೆ ಹೆಚ್ಚಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಹಾನೆ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.

ಸುದೀರ್ಘ ಕಾಲದ ಬಳಿಕ ದಿನೇಶ್ ಕಾರ್ತಿಕ್ ಟೆಸ್ಟ್ ಕ್ರಿಕೆಟ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮಿಂಚಿದರೆ, ಇಂಗ್ಲೆಂಡ್ ಪ್ರವಾಸಕ್ಕೂ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ಹೆಚ್ಚಿನ ಸವಾಲಾಗಲಿದೆ.

ಅಂತಿಮ ಹನ್ನೊಂದರ ಬಳಗದಲ್ಲಿ ಯಾರು?

ಅಂತಿಮ ಹನ್ನೊಂದರ ಬಳಗದಲ್ಲಿ ಯಾರು?

ಇನ್ನು ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿ ಇದೆ. ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಜೋಡಿಯಾಗಿ ಯಾರು ಇಳಿಯಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಮುರಳಿ ವಿಜಯ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್‌ನಲ್ಲಿ ಅವರಿಗೆ ಆಡಲು ಸಿಕ್ಕಿದ್ದು ಒಂದು ಅವಕಾಶ ಮಾತ್ರ. ಹೀಗಾಗಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಲೋಕೇಶ್ ರಾಹುಲ್ ಆರಂಭಿಕರಾಗಿ ಆಡುವ ಸಾಧ್ಯತೆ ಹೆಚ್ಚು.

ಚೇತೇಶ್ವರ ಪೂಜಾರ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಕನ್ನಡಿಗ ಕರುಣ್ ನಾಯರ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ ಆಗಿ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ.

ಒಂದು ವೇಳೆ ಆಲ್‌ರೌಂಡರ್‌ ಹಾಗೂ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲು ತೀರ್ಮಾನಿಸಿದರೆ ಕರುಣ್ ನಾಯರ್ ಬದಲು ರವೀಂದ್ರ ಜಡೇಜಾ ಅಥವಾ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳಬಹುದು. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ಸ್ಪಿನ್ನರ್‌ಗಳ ಬಳಗದಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ನಾಲ್ವರು ವೇಗದ ಬೌಲರ್‌ಗಳು ತಂಡದಲ್ಲಿದ್ದಾರೆ. ಅವರಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಆಡುವುದು ಬಹುತೇಕ ನಿಶ್ಚಿತ. ಶಾರ್ದೂಲ್ ಠಾಕೂರ್ ಅಥವಾ ಹೊಸ ಪ್ರತಿಭೆ ನವದೀಪ್ ಸೈನಿ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ.

ವರುಣ ಕಾಡುವ ಭೀತಿ

ವರುಣ ಕಾಡುವ ಭೀತಿ

ಮುಂಗಾರು ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಬೆಂಗಳೂರಿನಲ್ಲಿಯೂ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಆಫ್ಘಾನಿಸ್ತಾನಕ್ಕೆ ಮೊದಲ ಟೆಸ್ಟ್ ಕ್ರಿಕೆಟ್ ಆಸೆಗೆ ಅಡ್ಡಿ ಎದುರಾಗಬಹುದು.

ಮಳೆ ಜೋರಾದರೆ ಪಂದ್ಯ ರದ್ದಾಗುವ ಅಪಾಯವೂ ಇದೆ. ಸದ್ಯ ಬೆಂಗಳೂರಿನಲ್ಲಿ ಮಳೆ ಅಷ್ಟೇನೂ ತೀವ್ರವಾಗಿಲ್ಲ. ಅಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರನ್ನು ಹೊರಹಾಕುವ ವಿಶಿಷ್ಟ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಆಟ ಆರಂಭಿಸಲು ತೊಂದರೆಯಿಲ್ಲ.

ಆದರೆ, ದಟ್ಟನೆಯ ಮೋಡ ಕವಿದ ವಾತಾವರಣದಲ್ಲಿ ಆಟ ನಡೆಸುವುದು ಕಷ್ಟ. ಬುಧವಾರ ಮಳೆಯ ಕಾರಣ ಆಟಗಾರರ ಅಭ್ಯಾಸಕ್ಕೆ ಅಡ್ಡಿಯಾಗಿದೆ.

Story first published: Wednesday, June 13, 2018, 17:34 [IST]
Other articles published on Jun 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X