ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆಲ್ಲುವ ಛಲವನ್ನೇ ಮರೆಯಿತೇ ಆರ್‌ಸಿಬಿ?

ಬೆಂಗಳೂರು, ಏಪ್ರಿಲ್ 30: 'ಅದೇ ರಾಗ ಅದೇ ಹಾಡು' ಎನ್ನುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ವ್ಯಥೆ ಮುಂದುವರಿದಿದೆ. ತವರಿನ ಅಂಗಳದಲ್ಲೇ ಮತ್ತೆ ಮತ್ತೆ ಸೋಲುವ ಮೂಲಕ ತಾನು ಕಾಗದದ ಮೇಲಿನ ಹುಲಿ ಎಂಬುದನ್ನು ಸಾಬೀತುಪಡಿಸಿದೆ.

ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ತಂಡ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧವಾದರೂ ಗೆಲ್ಲಲಿದೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಆದರೆ ಆರ್‌ಸಿಬಿಯದು ಬದಲಾಗದ ಗೋಳು. ಬ್ಯಾಟಿಂಗ್‌ನಲ್ಲಿ ಅತಿಯಾದ ಅವಲಂಬನೆ ಒಂದೆಡೆಯಾದರೆ, ಬೌಲಿಂಗ್‌ನಲ್ಲಿ ಎದುರಾಳಿಗಳು ವಿಕೆಟ್ ಒಪ್ಪಿಸಿದರೂ ಪರಿಸ್ಥಿತಿಯ ಲಾಭವನ್ನು ಪಡೆದು ಒತ್ತಡ ಹೇರುವಲ್ಲಿ ವಿಫಲವಾಗುತ್ತಿರುವುದು ಇನ್ನೊಂದೆಡೆ. ಕೆಟ್ಟ ಫೀಲ್ಡಿಂಗ್ ಪ್ರತಿ ಬಾರಿಯೂ ತಂಡಕ್ಕೆ ಮುಳುವಾಗುತ್ತಿದೆ.

ಬೆಂಗಳೂರಿಗೆ ಮತ್ತೊಮ್ಮೆ ಸೋಲು, ಎಂದೂ ಮುಗಿಯದ ಗೋಳುಬೆಂಗಳೂರಿಗೆ ಮತ್ತೊಮ್ಮೆ ಸೋಲು, ಎಂದೂ ಮುಗಿಯದ ಗೋಳು

ಕೆಕೆಆರ್ ವಿರುದ್ಧದ ಪಂದ್ಯದಲ್ಲಿಯೂ ಆರ್‌ಸಿಬಿಗೆ ಗೆಲ್ಲಲು ಸಾಕಷ್ಟು ಅವಕಾಶಗಳಿದ್ದವು. ಆದರೆ, ಆರಂಭದಿಂದಲೇ ಅವುಗಳನ್ನು ಕೈಚೆಲ್ಲಿದ ಆರ್‌ಸಿಬಿ, ಮಾನಸಿಕವಾಗಿ ಸೋಲೊಪ್ಪಿಕೊಂಡಂತೆ ಕಾಣಿಸಿತು. ಭಾನುವಾರದ ಪಂದ್ಯದಲ್ಲಿ ಕೆಕೆಆರ್‌ನ ಗೆಲುವು ಮತ್ತು ಆರ್‌ಸಿಬಿಯ ಸೋಲಿಗೆ ಕೆಲವು ಕಾರಣಗಳನ್ನು ಹೀಗೆ ಪಟ್ಟಿಮಾಡಬಹುದು.

ಕೆಕೆಆರ್ ಟಾಸ್ ಗೆದ್ದಿದ್ದು

ಕೆಕೆಆರ್ ಟಾಸ್ ಗೆದ್ದಿದ್ದು

ಪ್ರತಿ ಪಂದ್ಯದಲ್ಲೂ ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ಗೆ ಹೇಳಿಮಾಡಿಸಿದ ಅನುಕೂಲತೆ ಹೊಂದಿದೆ. ಅದರಲ್ಲೂ ಚೇಸಿಂಗ್ ಮಾಡುವ ತಂಡಗಳಿಗೆ ಪಿಚ್ ನೆರವು ನೀಡುತ್ತದೆ. ಹಿಂದಿನ ಪಂದ್ಯದಲ್ಲಿಯೂ ಚೆನ್ನೈ ಬೃಹತ್ ಮೊತ್ತವನ್ನು ಬೆನ್ನಟ್ಟಿತ್ತು. ಅದೇ ವಿಶ್ವಾಸದೊಂದಿಗೆ ಕೆಕೆಆರ್ ಟಾಸ್ ಗೆದ್ದರೂ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸುವ ಧೈರ್ಯ ಮಾಡಿತು. ಆರಂಭದಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ತಿರುವು ನೀಡುತ್ತಿತ್ತು. ಇದನ್ನು ಕೆಕೆಆರ್ ಸ್ಪಿನ್ನರ್‌ಗಳು ಸದುಪಯೋಗಪಡಿಸಿಕೊಂಡರು.

ಕಾಡಿದ ಎಬಿಡಿ ಅನುಪಸ್ಥಿತಿ

ಕಾಡಿದ ಎಬಿಡಿ ಅನುಪಸ್ಥಿತಿ

ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣಕ್ಕೆ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಇದು ಆರ್‌ಸಿಬಿ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ತಂಡದ ಬ್ಯಾಟಿಂಗ್ ಎಬಿಡಿ ಮತ್ತು ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿದೆ. ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಕೊಹ್ಲಿ ಸಂಪೂರ್ಣ ಭಾರ ಹೊರಬೇಕಾಯಿತು. ಅಲ್ಲದೆ ಮಾನಸಿಕವಾಗಿ ಸಹ ಆರ್‌ಸಿಬಿ ತಂಡದ ಸ್ಥೈರ್ಯ ಕುಗ್ಗಲು ಕಾರಣವಾಯಿತು. ಫೀಲ್ಡಿಂಗ್‌ನಲ್ಲಿ ಕೂಡ ಡಿವಿಲಿಯರ್ಸ್ ಗೈರು ಕಾಡಿತು.

ನಿಧಾನಗತಿಯ ಆರಂಭ

ನಿಧಾನಗತಿಯ ಆರಂಭ

ಆರ್‌ಸಿಬಿಯ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಬ್ರೆಂಡನ್ ಮೆಕಲಂ ಬಿರುಸಿನ ಆಟಕ್ಕೆ ಹೆಸರಾದವರು. ಆದರೆ, ಕೆಕೆಆರ್ ವಿರುದ್ಧ ಇಬ್ಬರೂ ಆರಂಭದಲ್ಲಿ ರನ್ ಗಳಿಸಲು ಪರದಾಡಿದರು. ಕೆಕೆಆರ್‌ ಸ್ಪಿನ್ ಬೌಲಿಂಗ್‌ಗೆ ಕಂಗೆಟ್ಟವರಂತೆ ಕಂಡರು. ಹೀಗಾಗಿ ಪವರ್‌ ಪ್ಲೇನಲ್ಲಿ ಹೆಚ್ಚು ರನ್ ಹರಿದುಬರಲಿಲ್ಲ. ಚೆಂಡಿನ ಗತಿ ಮತ್ತು ತಿರುವನ್ನು ಗ್ರಹಿಸುವಲ್ಲಿ ಇಬ್ಬರೂ ವಿಫಲರಾದರು. ಮೆಕಲಂ ಕೊನೆಯಲ್ಲಿ ಸ್ವಲ್ಪ ಗಳಿಸುವಲ್ಲಿ ಸಪಲರಾದರು. ಆದರೆ, ಆರ್‌ಸಿಬಿಗೆ ಸಿಗಬೇಕಾದ ಆರಂಭ ದೊರಕಲಿಲ್ಲ.

ಒಮ್ಮೆಲೆ ವಿಕೆಟ್ ಕಳೆದುಕೊಂಡಿದ್ದು

ಒಮ್ಮೆಲೆ ವಿಕೆಟ್ ಕಳೆದುಕೊಂಡಿದ್ದು

ಆರ್‌ಸಿಬಿ ಆರಂಭದಲ್ಲಿ ಹೆಚ್ಚು ರನ್ ಗಳಿಸದಿದ್ದರೂ ವಿಕೆಟ್ ಕಳೆದುಕೊಂಡಿರಲಿಲ್ಲ. ಎಂಟು ಓವರ್‌ ನಂತರ ಎರಡು ಓವರ್‌ಗಳ ಅಂತರದಲ್ಲಿ ಇಬ್ಬರೂ ಓಪನರ್‌ಗಳ ಸಹಿತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ತಂಡದ ಮೇಲೆ ಒತ್ತಡ ಉಂಡುಮಾಡಿತು. ಹೀಗಾಗಿ ಕೊಹ್ಲಿ ವಿಕೆಟ್ ಒಪ್ಪಿಸದಂತೆ ಎಚ್ಚರಿಕೆಯ ಆಟದ ಮೊರೆ ಹೋದರು. ಇನ್ನೊಂದೆಡೆ ಮಂದೀಪ್ ಸಿಂಗ್ ಎರಡು ಸಿಕ್ಸರ್ ಸಿಡಿಸಿದರೂ ಸಾಕಾಗಲಿಲ್ಲ. ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳದಿದ್ದರೂ ಚಿನ್ನಸ್ವಾಮಿ ಅಂಗಳದಲ್ಲಿ ಈ ಸ್ಕೋರ್ ಸಾಕಾಗಲಿಲ್ಲ.

ಕೆಕೆಆರ್‌ಗೆ ಸಿಕ್ತು ಉತ್ತಮ ಆರಂಭ

ಕೆಕೆಆರ್‌ಗೆ ಸಿಕ್ತು ಉತ್ತಮ ಆರಂಭ

ಆರ್‌ಸಿಬಿ ಆರಂಭಿಕರ ಆಟಕ್ಕೆ ತದ್ವಿರುದ್ಧ ಆರಂಭ ಕೆಕೆಆರ್‌ಗೆ ಸಿಕ್ಕಿತು. ಸುನಿಲ್ ನರೇನ್ ಸಲೀಸಾಗಿ ಬೌಂಡರಿಗಳನ್ನು ಬಾರಿಸಿದರು. ಅದೃಷ್ಟವೂ ಅವರ ಪಾಲಿಗಿತ್ತು. ಶಾರ್ಟ್ ಪಿಚ್, ಬೌನ್ಸರ್ ಎಸೆತಗಳನ್ನು ಆಕಾಶ ಮಾರ್ಗದಲ್ಲಿಯೇ ನರೇನ್ ಅಟ್ಟಲು ಪ್ರಯತ್ನಿಸುತ್ತಿದ್ದರು. ಇವುಗಳಲ್ಲಿ ಕೆಲವು ಕ್ಯಾಚ್ ಆಗುವ ಅವಕಾಶಗಳಿದ್ದರೂ ಆರ್‌ಸಿಬಿಯನ್ನರ ಕೈಗೆ ಎಟುಕಲಿಲ್ಲ. ಪವರ್‌ ಪ್ಲೇನಲ್ಲಿ ತಂಡ ಐವತ್ತರ ಗಡಿ ದಾಟಲು ನರೇನ್ ಕಾರಣರಾದರು.

ಕೈಚೆಲ್ಲಿದ ಕ್ಯಾಚ್

ಕೈಚೆಲ್ಲಿದ ಕ್ಯಾಚ್

ವಾಷಿಂಗ್ಟನ್ ಸುಂದರ್ ಸ್ಥಾನದಲ್ಲಿ ಅವಕಾಶ ಪಡೆದ ತಮಿಳುನಾಡಿನ ಮತ್ತೊಬ್ಬ ಆಟಗಾರ ಮುರುಗನ್ ಅಶ್ವಿನ್, ಕ್ರಿಸ್ ಲಿನ್ ಏಳು ರನ್ ಗಳಿಸಿದ್ದಾಗ ನೀಡಿದ ಕ್ಯಾಚ್‌ ಅನ್ನು ಕೈಚೆಲ್ಲಿದರು. ಇದು ತಂಡಕ್ಕೆ ಬಲು ದುಬಾರಿಯಾಯಿತು. ಕೆಕೆಆರ್ ಒಂದೆಡೆ ರನ್ ಪೇರಿಸುತ್ತಿದ್ದರೂ ಕ್ರಿಸ್ ಲಿನ್ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದರು. ಕೆಲವು ಎಸೆತಗಳನ್ನು ಆಡುವಲ್ಲಿ ವಿಫಲರಾಗುತ್ತಿದ್ದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸದಿದ್ದರೂ ಕೊನೆಯವರೆಗೂ ಅವರು ಔಟಾಗದೆ ನಿಂತರು. ಇದರಿಂದ ಉಳಿದ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ಬ್ಯಾಟ್ ಬೀಸಿದರು. ಅಶ್ವಿನ್ ಕ್ಯಾಚ್ ಪಡೆದಿದ್ದರೆ ಕೆಕೆಆರ್ ಮೇಲೆ ಒತ್ತಡ ಹೆಚ್ಚುತ್ತಿತ್ತು.

ಉತ್ತಪ್ಪ ಬ್ಯಾಟಿಂಗ್ ವೈಭವ

ಉತ್ತಪ್ಪ ಬ್ಯಾಟಿಂಗ್ ವೈಭವ

ಕ್ರಿಸ್ ಲಿನ್ ಬ್ಯಾಟ್‌ನಿಂದ ರನ್ ಹರಿದುಬರುತ್ತಿರಲಿಲ್ಲ. ಎರಡನೆಯ ವಿಕೆಟ್‌ಗೆ ಜತೆಯಾದ ರಾಬಿನ್ ಉತ್ತಪ್ಪ ಮೂರು ಸಿಕ್ಸರ್ ಮತ್ತು ಮೂರು ಬೌಂಡರಿ ಸಿಡಿಸಿ ಕೆಕೆಆರ್ ರನ್ ರೇಟ್ ಹೆಚ್ಚಿಸಿದರು. ಮುರುಗನ್ ಅಶ್ವಿನ್ ಬೌಲಿಂಗ್‌ನಲ್ಲಿ ಕೆಲವು ಎಸೆತಗಳನ್ನು ಎದುರಿಸುವಾಗ ಉತ್ತಪ್ಪ ತಡಕಾಡಿದರೂ ಬೌಂಡರಿಗಳ ಮೂಲಕ ಅವುಗಳನ್ನು ಸರಿದೂಗಿಸಿದರು. ಇದರಿಂದಾಗಿ ಕೆಕೆಆರ್‌ಗೆ ಅಗತ್ಯವಿದ್ದ ರನ್ ಸರಾಸರಿಯ ಪ್ರಮಾಣ ತಗ್ಗಿತು. ಉತ್ತಪ್ಪ ಔಟಾಗುವಾಗ ಕೆಕೆಆರ್ ಉತ್ತಮ ಸ್ಥಿತಿಗೆ ತಲುಪಿತ್ತು.

ದಿನೇಶ್ ಕಾರ್ತಿಕ್ ಅಬ್ಬರ

ದಿನೇಶ್ ಕಾರ್ತಿಕ್ ಅಬ್ಬರ

ನಿತೀಶ್ ರಾಣಾ ಗಾಯಗೊಂಡು ನಿವೃತ್ತರಾದಾಗ ಕ್ರೀಸ್‌ಗೆ ಬಂದ ಆಂಡ್ರೂ ರಸೆಲ್ ಮೊದಲ ಎಸೆತದಲ್ಲೇ ಔಟಾದರು. ಈ ವೇಳೆ ಆರ್‌ಸಿಬಿ ಶಿಸ್ತಿಬದ್ಧ ದಾಳಿ ನಡೆಸಲಿಲ್ಲ. ಡೆತ್‌ ಓವರ್‌ನಲ್ಲಿ ಯಾರ್ಕರ್ ಪ್ರಯೋಗಿಸುವುದನ್ನೇ ಮರೆತಿರುವ ಆರ್‌ಸಿಬಿ ಬೌಲರ್‌ಗಳು ಕಾರ್ತಿಕ್‌ಗೆ ರನ್ ಗಳಿಸಲು ಅವಕಾಶ ನೀಡಿದರು. ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾಗುವ ಮುನ್ನ ಕಾರ್ತಿಕ್, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು.

ಬೌಲಿಂಗ್‌ನಲ್ಲಿ ಶಿಸ್ತಿನ ಕೊರತೆ

ಬೌಲಿಂಗ್‌ನಲ್ಲಿ ಶಿಸ್ತಿನ ಕೊರತೆ

ಟಿಮ್ ಸೌಥಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಮೊದಲ ಎರಡು ಓವರ್‌ಗಳಲ್ಲಿ ರನ್ ಸೋರಿಕೆಯಾಯಿತು. ಕೊನೆಯಲ್ಲಿ ಅವರು ಹೆಚ್ಚು ರನ್ ನೀಡಲಿಲ್ಲ. ಅದಕ್ಕೆ ತಕ್ಕ ಸಾಥ್ ಇನ್ನಿಬ್ಬರು ವೇಗದ ಬೌಲರ್‌ಗಳಾದ ಉಮೇಶ್ ಯಾದವ್ ಮತ್ತು ಮೊಹಮದ್ ಸಿರಾಜ್ ಅವರಿಂದ ಸಿಗಲಿಲ್ಲ. ಯುಜುರ್ವೇಂದ್ರ ಚಾಹಲ್ ವಿಕೆಟ್ ಪಡೆಯದಿದ್ದರೂ ತೀರಾ ದುಬಾರಿಯಾಗಲಿಲ್ಲ. ತಂಡಕ್ಕೆ ಹೆಚ್ಚುವರಿ ಬೌಲರ್‌ಗಳ ಕೊರತೆ ಕಾಣಿಸಿತು. ಆಲ್‌ರೌಂಡರ್‌ ರೂಪದಲ್ಲಿ ತಂಡವನ್ನು ಸೇರಿಕೊಂಡಿರುವ ಕಾಲಿನ್ ಗ್ರಾಂಡ್‌ಹೋಮ್‌ಗೆ ನಾಯಕ ವಿರಾಟ್ ಕೊಹ್ಲಿ ಎರಡನೆಯ ಪಂದ್ಯದಲ್ಲಿಯೂ ಬೌಲಿಂಗ್ ನೀಡದೆ ಇರುವುದು ಅಚ್ಚರಿ ಮೂಡಿಸಿತು.

ತಂಡದ ಆಯ್ಕೆಯಲ್ಲೇ ಸಮಸ್ಯೆ

ತಂಡದ ಆಯ್ಕೆಯಲ್ಲೇ ಸಮಸ್ಯೆ

ಆಟಗಾರನಾಗಿ ಕೊಹ್ಲಿ ಅವರನ್ನು ದೂರಲು ಸಾಧ್ಯವಿಲ್ಲ. ಆದರೆ, ನಾಯಕತ್ವವನ್ನೂ ಅಷ್ಟೇ ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಅವರು ಸಮರ್ಥರೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಉತ್ತಮ ತಂಡವಿದ್ದೂ ಗೆಲುವು ಸಿಗದೆ ಇರುವುದಕ್ಕೆ ಅವರ ನಾಯಕತ್ವದಲ್ಲಿನ ವೈಫಲ್ಯವೇ ಕಾರಣ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ತಂಡದ ಆಯ್ಕೆಯಲ್ಲಿಯೇ ಕೊಹ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಥಳೀಯ ಆಟಗಾರ ಪವನ್ ದೇಶಪಾಂಡೆ ಅವರಿಗೆ ಅವಕಾಶವನ್ನೇ ನೀಡುತ್ತಿಲ್ಲ. ಕಳಪೆ ಆಟವಾಡಿದರೂ ಪವನ್ ನೇಗಿ, ಸರ್ಫರಾಜ್ ಖಾನ್, ಮೊಹಮದ್ ಸಿರಾಜ್ ಮತ್ತೆ ಮತ್ತೆ ಅವಕಾಶ ಪಡೆಯುತ್ತಿದ್ದಾರೆ. ಉತ್ತಮ ಆರಂಭ ಒದಗಿಸುವ ಸಾಮರ್ಥ್ಯವುಳ್ಳ ಪಾರ್ಥಿವ್ ಪಟೇಲ್ ಕೂಡ ಬೆಂಚು ಕಾಯುತ್ತಿದ್ದಾರೆ. ಆಲ್‌ರೌಂಡರ್‌ಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬೌಲಿಂಗ್ ಬದಲಾವಣೆಯಲ್ಲಿಯೂ ಅವರು ಎಡವುತ್ತಿದ್ದಾರೆ.

Story first published: Monday, April 30, 2018, 10:43 [IST]
Other articles published on Apr 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X