
ದುಬೈ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ (ನವೆಂಬರ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸುವುದರೊಂದಿಗೆ ಈ ದಾಖಲೆ ನಿರ್ಮಾಣವಾಗಿದೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವನ್ನಾಚರಿಸಿತು. ಈ ಜಯದೊಂದಿಗೆ ಕೀರನ್ ಪೊಲಾರ್ಡ್ 15 ಟಿ20 ಪ್ರಶಸ್ತಿಗಳನ್ನು ಗೆದ್ದಂತಾಗಿದೆ. ಟಿ20ನಲ್ಲಿ ಇಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದು ಇವರೊಬ್ಬರೆ. ಬೇರೆ ಬೇರೆ ತಂಡಗಳನ್ನು, ಬೇರೆ ಬೇರೆ ಲೀಗ್‌ಗಳಲ್ಲಿ ಪ್ರತಿನಿಧಿಸಿ ಪೊಲಾರ್ಡ್ ಈ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ 164 ಪಂದ್ಯಗಳನ್ನಾಡಿರುವ ಕೀರನ್ ಪೊಲಾರ್ಡ್ 3023 ರನ್, 60 ವಿಕೆಟ್‌ಗಳು, 73 ಟಿ20ಐ ಇನ್ನಿಂಗ್ಸ್‌ಗಳಲ್ಲಿ 1123 ರನ್, 35 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ಆಡುವ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಅಲ್ಲದೆ ಟ್ರಿನ್‌ಬಾಗೋ ನೈಟ್ ರೈಡರ್ಸ್, ಧಾಕಾ ಗ್ಲಾಡಿಯೇಟರ್ಸ್ ಇಂಥ ಅನೇಕ ತಂಡಗಳಿಗೆ ಆಡುತ್ತಾರೆ.
ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗೆ 7 ವಿಕೆಟ್ ಕಳೆದು 156 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.4 ಓವರ್‌ಗೆ 5 ವಿಕೆಟ್ ಕಳೆದು 157 ರನ್ ಗಳಿಸಿತು. ಟ್ರೆಂಟ್‌ಬೌಲ್ಟ್ ಮ್ಯಾನ್ ಆಫ್ ದ ಮ್ಯಾಚ್ ಪ್ರಸಸ್ತಿ ಪಡೆದುಕೊಂಡರು.