ಕೆಪಿಎಲ್ 2018: ವಾರಿಯರ್ಸನ್ನು 2 ರನ್ ನಿಂದ ಸೋಲಿಸಿದ ಬುಲ್ಸ್!

ಮೈಸೂರು, ಸೆಪ್ಟಂಬರ್ 1: ಆಗಸ್ಟ್ 24ರಂದು ಮುಂದೂಡಲ್ಪಟ್ಟಿದ್ದ ಬಿಜಾಪುರ ಬುಲ್ಸ್ ಮತ್ತು ಮೈಸೂರು ವಾರಿಯರ್ಸ್ ನಡುವಿನ ಕೆಪಿಎಲ್ 10ನೇ ಪಂದ್ಯ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಇದರಲ್ಲಿ ಬಿಜಾಪುರ ಬುಲ್ಸ್ ಎರಡು ರನ್ ರೋಚಕ ಜಯ ಸಾಧಿಸಿದೆ. (ಚಿತ್ರದಲ್ಲಿ ಪಂದ್ಯಶ್ರೇಷ್ಠ ಭರತ್ ಚಿಪ್ಲಿ ಅವರ ಪುಟಾಣಿ ಬೊಂಬೆಯೊಂದಿಗೆ ರಾಜು ಭಟ್ಕಳ್)
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಿಜಾಪುರ ಬುಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು 167 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ಗೆಲುವಿನಂಚಿನಲ್ಲಿ ಎಡವಿತು. ವಾರಿಯರ್ಸ್ 20 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 165 ರನ್ ಪೇರಿಸಿ ಕೇವಲ 2 ರನ್ ನಿಂದ ಸೋಲೊಪ್ಪಿಕೊಂಡಿತು.
ಬುಲ್ಸ್ ಪರವಾಗಿ ನಾಯಕ ಭರತ್ ಚಿಪ್ಲಿ ಭರ್ಜರಿ ಆಟವಾಡಿದರು. 53 ಎಸೆತಗಳಿಗೆ 63 ರನ್ ಪೇರಿಸಿದ ಭರತ್, ಪ್ರತೀಕ್ ಜೈನ್ ಓವರ್ ನಲ್ಲಿ ಔಟಾದರು. ಮೀರ್ ಅಬ್ಬಾಸ್ 42 (24), ಸುನೀಲ್ ರಾಜು 28 (17) ರನ್ ಕೂಡ ಗೆಲುವಿನ ನೆಲೆಯಲ್ಲಿ ನೆರವಿಗೆ ಬಂತು.
ವಾರಿಯರ್ಸ್ ತಂಡದ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿ ಸೋಲಿನ ಬೆಲೆ ತೆರುವಂತೆ ಮಾಡಿತು. ನಾಯಕ ಜಗದೀಶ್ ಸಚ್ಚಿತ್ 34, ಕೃಷ್ಣಮೂರ್ತಿ ಸಿದ್ಧಾರ್ತ್ 28, ರಾಜು ಭಟ್ಕಳ್ 29 ರನ್ ಸೇರಿಸಿದರಾದರೂ ತಂಡಕ್ಕೆ ಗೆಲುವನ್ನು ತಂದುಕೊಳ್ಳಲಾಗಲಿಲ್ಲ. ಬಿಜಾಪುರದ ಭರತ್ ಚಿಪ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಅಂದ್ಹಾಗೆ ಈ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯಬೇಕಿತ್ತು. ಆಗಸ್ಟ್ 24ರಂದು ನಡೆಯಲಿದ್ದ ಪಂದ್ಯ ರದ್ದಾಗಿತ್ತು. ಅನಂತರದ ಎಲ್ಲಾ ಕೆಪಿಎಲ್ ಪಂದ್ಯಗಳನ್ನು ಕೆಎಸ್ಸಿಎ ಮೈಸೂರು ಮೈದಾನಕ್ಕೆ ವರ್ಗಾಯಿಸಿತ್ತು. ಅಂದು ರದ್ದಾಗಿದ್ದ 10ನೇ ಪಂದ್ಯ ಇಂದು ಬುಲ್ಸ ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications