ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಗೆ ಕೊನೆಗೂ ಸಿಕ್ಕಿತು ಸಿಹಿ: ಮುಂದೆ ಇದೆ ಸವಾಲಿನ ಬೆಟ್ಟ

ಬೆಂಗಳೂರು, ಮೇ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕೊನೆಗೂ ಸಂಭ್ರಮದ ಕಳೆ ಮೂಡಿದೆ. ತಂಡದ ಸೋಲಿನ ಚಾಳಿಗೆ ಒಗ್ಗಿಕೊಂಡಿರುವ ಅಭಿಮಾನಿಗಳಲ್ಲಿ ಹುರುಪು ಕೊಂಚಮಟ್ಟಿಗೆ ಮರುಕಳಿಸಿದೆ.

ಆದರೆ, ಇನ್ನುಳಿದ ಎಲ್ಲ ಪಂದ್ಯಗಳನ್ನೂ ಗೆದ್ದರೆ ಮಾತ್ರ ಆರ್‌ಸಿಬಿ ಅಖಾಡದಲ್ಲಿ ಉಳಿದುಕೊಳ್ಳುವ ಅರ್ಹತೆ ಗಿಟ್ಟಿಸಿಕೊಳ್ಳಬಲ್ಲದು. ಆಡಿದ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿರುವ ಆರ್‌ಸಿಬಿ, ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

-0.301 ನೆಟ್‌ರನ್‌ ರೇಟ್ ಹೊಂದಿರುವ ಬೆಂಗಳೂರು ತಂಡ ಉಳಿದ ಪಂದ್ಯಗಳಲ್ಲಿ ಗೆಲ್ಲುವುದಷ್ಟೇ ಅಲ್ಲ, ಉತ್ತಮ ರನ್ ಸರಾಸರಿಯನ್ನೂ ಹೊಂದಬೇಕಿದೆ.

ಐಪಿಎಲ್ 2018: ಚಾಂಪಿಯನ್ ಮುಂಬೈ ಬಗ್ಗುಬಡಿದ ಬೆಂಗಳೂರುಐಪಿಎಲ್ 2018: ಚಾಂಪಿಯನ್ ಮುಂಬೈ ಬಗ್ಗುಬಡಿದ ಬೆಂಗಳೂರು

ಏನೇ ಆದರೂ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದ ಕಹಿಯನ್ನು ಮರೆಸುವಂತೆ ಸೇಡು ತೀರಿಸಿಕೊಂಡಿರುವ ಆರ್‌ಸಿಬಿ ಪುಟಿದೇಳುವ ಭರವಸೆಯನ್ನು ಹುಟ್ಟುಹಾಕಿದೆ. ಬ್ಯಾಟಿಂಗ್‌ನಲ್ಲಿ ಎಡವಿದರೂ, ಅಚ್ಚರಿ ಎಂಬಂತೆ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಮುಂಬೈನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನಿಖರತೆಯನ್ನೇ ಮುಂದುವರಿಸಬೇಕಿದೆ. ಅನಾರೋಗ್ಯಕ್ಕೆ ತುತ್ತಾಗಿರುವ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಿದರೆ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಗೊಳ್ಳಲಿದೆ.

ತವರಿನ ಅಂಗಳದಲ್ಲಿ ಸಾಧಾರಣ ಸವಾಲು ನೀಡಿದರೂ ಮುಂಬೈ ವಿರುದ್ಧ ತನ್ನ ಪರಾಕ್ರಮ ಮೆರೆದ ಆರ್‌ಸಿಬಿಯ ಗೆಲುವಿಗೆ ನೆರವಾದ ಕೆಲವು ಅಂಶಗಳನ್ನು ನೋಡೋಣ

ಟಾಸ್ ಸೋತರೂ ಬ್ಯಾಟಿಂಗ್‌ ಅವಕಾಶ

ಟಾಸ್ ಸೋತರೂ ಬ್ಯಾಟಿಂಗ್‌ ಅವಕಾಶ

ಚಿನ್ನಸ್ವಾಮಿ ಅಂಗಳ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೃಹತ್ ಮೊತ್ತ ಗಳಿಸಲು ಸಾಧ್ಯ. ಹಾಗೆಯೇ ಚೇಸಿಂಗ್ ತಂಡವೂ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆದ್ದ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚಿನ ಕೊನೆಯ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಆರ್‌ಸಿಬಿ ವಿರುದ್ಧ ಚೇಸಿಂಗ್ ಮಾಡಿ ಗೆದ್ದಿದ್ದವು. ಅದೇ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದು ಈ ಪಂದ್ಯದಲ್ಲಿ ಆರ್‌ಸಿಬಿಗೆ ವರದಾನವಾಯಿತು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ

ಎರಡನೆಯ ಪಂದ್ಯದಲ್ಲಿಯೂ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಕೊಹ್ಲಿ ಪಡೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಮನನ್ ವೊಹ್ರಾ ಅವರನ್ನು ಓಪನಿಂಗ್ ಕಳುಹಿಸಿದ್ದು ಸಫಲವಾಯಿತು. ಆದರೆ, ಕ್ವಿಂಟನ್ ಡಿ ಕಾಕ್ ರನ್ ಗಳಿಸಲು ಪರದಾಡಿದರು. ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೊಹ್ಲಿ, ಬ್ರೆಂಡನ್ ಮೆಕಲಮ್ ಅವರಿಗೆ ಅವಕಾಶ ನೀಡಿದರು. ಇದರಿಂದ ಮೆಕಲಮ್ ಮತ್ತು ಕೊಹ್ಲಿ ವಿಕೆಟ್ ಕಾಯ್ದುಕೊಂಡು ರನ್ ವೇಗ ಹೆಚ್ಚಿಸಲು ಸಾಧ್ಯವಾಯಿತು.

ಆರ್‌ಸಿಬಿಗೆ ನೆರವಾದ ಕೊನೆಯ ಓವರ್

ಆರ್‌ಸಿಬಿಗೆ ನೆರವಾದ ಕೊನೆಯ ಓವರ್

ಕೊನೆಯ ಓವರ್‌ಗಳಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯ ಓವರ್‌ ಎಸೆದ ಮಿಚೆಲ್ ಮೆಕ್‌ಕ್ಲನಾನ್ ಆರ್‌ಸಿಬಿ ತಂಡಕ್ಕೆ ವರವಾದರು. ಈ ಓವರ್‌ನಲ್ಲಿ ಒಂದು ಸಿಕ್ಸರ್ ಬಾರಿಸಿದ್ದ ಗ್ರಾಂಡ್‌ಹೋಮ್‌ ಆರನೇ ಎಸೆತವನ್ನು ಸಹ ಸಿಕ್ಸರ್‌ ಸಿಡಿಸಿದರು. ಈ ಚೆಂಡು ನೋಬಾಲ್ ಆಗಿದ್ದರಿಂದ ಆರ್‌ಸಿಬಿಗೆ ಮತ್ತೊಂದು ಎಸೆತ ಎದುರಿಸುವ ಅವಕಾಶ ಸಿಕ್ಕಿತು. ಆ ಎಸೆತವನ್ನೂ ಗ್ರಾಂಡ್‌ಹೋಮ್‌ ಪ್ರೇಕ್ಷಕರ ಸಾಲಿನತ್ತ ಕಳುಹಿಸಿದರು. ಕೊನೆಯ ಓವರ್‌ನಲ್ಲಿ 24 ರನ್ ಬಂದಿದ್ದು ಆರ್‌ಸಿಬಿ ಉತ್ತಮ ಮೊತ್ತ ಕಲೆಹಾಕಲು ನೆರವಾಯಿತು.

ಶಿಸ್ತುಬದ್ಧ ಬೌಲಿಂಗ್ ದಾಳಿ

ಶಿಸ್ತುಬದ್ಧ ಬೌಲಿಂಗ್ ದಾಳಿ

ಟಿಮ್ ಸೌಥಿ ಮತ್ತು ಉಮೇಶ್ ಯಾದವ್ ಚುರುಕಿನ ದಾಳಿ ನಡೆಸಿ ಆರಂಭದಲ್ಲಿಯೇ ಮುಂಬೈ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿದರು. ಮೊದಲ ಓವರ್‌ನಲ್ಲಿಯೇ ಇಶಾನ್ ಕಿಶಾನ್ ವಿಕೆಟ್ ಒಪ್ಪಿಸಿದರು. ಇದರಿಂದ ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೊಹಮದ್ ಸಿರಾಜ್ ಕೂಡ ನಿಖರ ದಾಳಿ ನಡೆಸಿದರು.

ಸತತ ಎರಡು ವಿಕೆಟ್ ಪತನ

ಸತತ ಎರಡು ವಿಕೆಟ್ ಪತನ

ಉಮೇಶ್ ಯಾದವ್ ಎಸೆದ ನಾಲ್ಕನೆಯ ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಎಲ್‌ಬಿಡಬ್ಲ್ಯೂ ಆದರು. ಕೂಡಲೇ ಅವರು ಮೂರನೇ ಅಂಪೈರ್‌ ಮೊರೆ ಹೋದರೂ ಫಲಕಾರಿಯಾಗಲಿಲ್ಲ. ಮರು ಎಸೆತದಲ್ಲೇ ರೋಹಿತ್ ಶರ್ಮಾ ಬ್ಯಾಟ್‌ನ ಒಳ ಅಂಚಿಗೆ ಸವರಿ ಬಂದ ಚೆಂಡನ್ನು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅದ್ಭುತವಾಗಿ ಜಿಗಿದು ಹಿಡಿತಕ್ಕೆ ಪಡೆದುಕೊಂಡರು. ಅಂಪೈರ್ ನಾಟ್‌ಔಟ್ ಎಂದು ಘೋಷಿಸಿದರೂ ಬ್ಯಾಟ್‌ಗೆ ತಗುಲಿರುವುದು ಖಚಿತವಾಗಿದ್ದ ಡಿ ಕಾಕ್ ರಿವ್ಯೂ ತೆಗೆದುಕೊಳ್ಳುವಂತೆ ಕೊಹ್ಲಿ ಮನವೊಲಿಸಿದರು. ಈ ಓವರ್‌ ಮುಂಬೈ ತಂಡಕ್ಕೆ ಆಘಾತ ಉಂಟುಮಾಡಿತು.

ತಿರುವು ಪಡೆದುಕೊಂಡ ಪಿಚ್

ತಿರುವು ಪಡೆದುಕೊಂಡ ಪಿಚ್

ಪಂದ್ಯದ ಅರ್ಧಭಾಗದಲ್ಲಿ ಪಿಚ್ ವಿಪರೀತ ತಿರುವು ಪಡೆದುಕೊಳ್ಳಲು ಆರಂಭಿಸಿತು. ಯಜುರ್ವೇಂದ್ರ ಚಾಹಲ್ ಅವರ ಲೆಗ್‌ಸ್ಪಿನ್‌ ಎಸೆತಗಳನ್ನು ಅಂದಾಜಿಸಲು ಡುಮಿನಿ ಮತ್ತು ಪೊಲಾರ್ಡ್ ತಿಣುಕಾಡಿದರು. ವಿಕೆಟ್ ಕೀಪರ್‌ ಚುರಕುತನಕ್ಕೂ ಚಾಹಲ್ ಸ್ಪಿನ್ ಸವಾಲೊಡ್ಡಿತು. ಆದರೆ, ವಾಷಿಂಗ್ಟನ್ ಸುಂದರ್ ಸ್ಪಿನ್ ಆಟ ಇಲ್ಲಿ ನಡೆಯಲಿಲ್ಲ. ಅವರು ಎಸೆದ ಒಂದೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 15 ರನ್ ದೋಚಿದರು.

ವಿಕೆಟ್ ಒಪ್ಪಿಸಿದ ಪಾಂಡ್ಯ ಸೋದರರು

ವಿಕೆಟ್ ಒಪ್ಪಿಸಿದ ಪಾಂಡ್ಯ ಸೋದರರು

ಜೆಪಿ ಡುಮಿನಿ ಔಟಾದ ಬಳಿಕ ಜತೆಗೂಡಿದ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಸಹೋದರರು ಆರ್‌ಸಿಬಿ ಪಾಳಯದಲ್ಲಿ ತುಸು ಆತಂಕ ಮೂಡಿಸಿದರು. ನಿಧಾನವಾಗಿ ರನ್ ಪೇರಿಸತೊಡಗಿದರು. ಕೊನೆಯ ಎರಡು ಓವರ್‌ಗಳಲ್ಲಿ ಬಾಕಿ ಉಳಿದ ರನ್ ಗುರಿ ತಲುಪುವ ಉದ್ದೇಶ ಹೊಂದಿದ್ದರು. ಆದರೆ ಈ ಹಂತದಲ್ಲಿ ಕೃಣಾಲ್ ಪಾಂಡ್ಯ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ನ ಮೊದಲ ಚೆಂಡಿನಲ್ಲೇ ಹಾರ್ದಿಕ್ ಕೂಡ ಔಟಾಗಿದ್ದು, ಆರ್‌ಸಿಬಿಯಲ್ಲಿ ಕವಿದಿದ್ದ ಆತಂಕದ ಮೋಡವನ್ನು ದೂರ ಮಾಡಿತು.

ಅನುಷ್ಕಾ ಜನ್ಮದಿನಕ್ಕೆ ಉಡುಗೊರೆ

ಅನುಷ್ಕಾ ಜನ್ಮದಿನಕ್ಕೆ ಉಡುಗೊರೆ

ಅನುಷ್ಕಾ ಶರ್ಮಾ ಪಂದ್ಯ ನೋಡಲು ಬಂದರೆ ತಂಡ ಸೋಲುತ್ತದೆ ಎಂಬ ಅಪವಾದವನ್ನು ಅವರು ಮತ್ತು ಕೊಹ್ಲಿ ಪ್ರೇಮ ಪ್ರಸಂಗ ಆರಂಭವಾದ ದಿನಗಳಿಂದಲೂ ಹೊತ್ತುಕೊಂಡಿದ್ದಾರೆ. ಅನುಷ್ಕಾ ವೀಕ್ಷಿಸಿದ ಪಂದ್ಯಗಳಲ್ಲಿ ಹಲವು ಗೆದ್ದರೂ, ಸೋತ ಪಂದ್ಯಗಳಲ್ಲಿನ ಅನುಷ್ಕಾ ಹಾಜರಾತಿ ಕೆಲವು ಅಭಿಮಾನಿಗಳ ಕೋಪಕ್ಕೆ ತುತ್ತಾಗುತ್ತಿತ್ತು. ಈ ಪಂದ್ಯ ವೀಕ್ಷಿಸಲು ಅನುಷ್ಕಾ ಕ್ರೀಡಾಂಗಣಕ್ಕೆ ಬರುವುದರಿಂದ ಆರ್‌ಸಿಬಿ ಸೋಲುವುದು ನಿಶ್ಚಿತ ಎಂದೇ ಕೆಲವರು ಹೇಳಿದ್ದರು. ಈಗ ಪಂದ್ಯ ಗೆದ್ದಿರುವುದರಿಂದ ಅನುಷ್ಕಾ ಮೇಲಿನ ಕಳಂಕ ದೂರವಾಗುತ್ತದೆಯೋ ನೋಡಬೇಕು. ಏನೇ ಇರಲಿ ಮಂಗಳವಾರ ಅನುಷ್ಕಾ ಜನ್ಮದಿನ. ಪತ್ನಿಯ ಜನ್ಮದಿನಕ್ಕೆ ಕೊಹ್ಲಿ ಗೆಲುವಿನ ಉಡುಗೊರೆ ನೀಡಿದ್ದಾರೆ. ಅನುಷ್ಕಾ ಕೊನೆಗೂ ಕ್ರೀಡಾಂಗಣದಲ್ಲಿ ಮುಖವರಳಿಸಿದ್ದಾರೆ.

Story first published: Wednesday, May 2, 2018, 12:14 [IST]
Other articles published on May 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X