ಆರ್‌ಸಿಬಿ-ಮುಂಬೈ: ಸಮಾನ ದುಃಖಿಗಳ ನಡುವೆ ಗೆಲುವು ಯಾರಿಗೆ?

Posted By:

ಬೆಂಗಳೂರು, ಏಪ್ರಿಲ್ 17: ಇದುವರೆಗಿನ ಐಪಿಎಲ್ ಪಂದ್ಯಗಳಲ್ಲೇ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಸಜ್ಜಾಗುತ್ತಿದೆ.

ಕಳೆದ ಬಾರಿ ನಾಯಕ, ಈ ಬಾರಿ ಎದುರಾಳಿ: ಟ್ವಿಟ್ಟಿಗರ ಪ್ರತಿಕ್ರಿಯೆಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಹಣಾಹಣಿಗಿಂತಲೂ ಎಲ್ಲರ ಕಣ್ಣು ನೆಟ್ಟಿರುವುದು ಉಭಯ ತಂಡಗಳ ನಾಯಕರ ಮೇಲೆ. ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಣ ಮುಖಾಮುಖಿ ಕುತೂಹಲ ಮೂಡಿಸಿದೆ.

ಮೂರೂ ಪಂದ್ಯದಲ್ಲಿ ಮುಂಬೈಗೆ ಸೋಲು

ಮೂರೂ ಪಂದ್ಯದಲ್ಲಿ ಮುಂಬೈಗೆ ಸೋಲು

ಎರಡು ಬಲಿಷ್ಠ ತಂಡಗಳಾದರೂ, ಅಂಕಪಟ್ಟಿಯಲ್ಲಿ ಮಾತ್ರ ಕೆಳಭಾಗದಲ್ಲಿವೆ. ಹಾಗೆಂದು ಈ ತಂಡಗಳನ್ನು ಕಡೆಗಣಿಸುವಂತಿಲ್ಲ. ಕಳೆದ ಆವೃತ್ತಿಗಳಲ್ಲಿಯೂ ಆರಂಭದಲ್ಲಿ ಸತತ ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್, ಕೊನೆಗೆ ಪುಟಿದೆದ್ದು ಟ್ರೋಪಿಗೆ ಮುತ್ತಿಕ್ಕಿದ್ದನ್ನು ಮರೆಯುವಂತಿಲ್ಲ.

ಮುಂಬೈ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಪಾತಾಳದಲ್ಲಿದೆ. ಅದಕ್ಕಿಂತ ತುಸು ಉತ್ತಮ ಸ್ಥಿತಿ ಆರ್‌ಸಿಬಿಯದ್ದು. ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಆರ್‌ಸಿಬಿ ಮುಂಬೈಗಿಂತ ಎರಡು ಹೆಜ್ಜೆ ಮುಂದಿದೆಯಷ್ಟೇ.

ಎರಡೂ ತಂಡಗಳು ನಿರೀಕ್ಷೆಗೆ ತಕ್ಕಂತೆ ಇದುವರೆಗೂ ಆಡಿಲ್ಲ. ಹೀಗಾಗಿ ಇಬ್ಬರಲ್ಲಿ ಯಾರು ಸಮರ್ಥರು ಎಂಬ ಪ್ರಶ್ನೆಗೆ ಉತ್ತರ ನೀಡಲು ತಂಡಗಳು ಕಾತರವಾಗಿವೆ. ಉಭಯ ತಂಡಗಳ ಬಲಾಬಲ ಹೇಗಿದೆ ನೋಡೋಣ.

ಆರ್‌ಸಿಬಿಯ ಲೈನ್‌ಅಪ್ ಬಲಿಷ್ಠ

ಆರ್‌ಸಿಬಿಯ ಲೈನ್‌ಅಪ್ ಬಲಿಷ್ಠ

ಆರ್‌ಸಿಬಿಯ ಬ್ಯಾಟಿಂಗ್ ಲೈನ್‌ಅಪ್ ಅದರ ಶಕ್ತಿಯೂ ಹೌದು. ನಾಯಕ ವಿರಾಟ್ ಕೊಹ್ಲಿ, ಬ್ರೆಂಡನ್ ಮೆಕಲಮ್, ಎಬಿ ಡಿವಿಲಿಯರ್ಸ್, ಮಂದೀಪ್ ಸಿಂಗ್, ಕ್ವಿಂಟನ್ ಡಿ ಕಾಕ್ ಪ್ರಮುಖ ಬ್ಯಾಟಿಂಗ್ ಶಕ್ತಿಗಳು. ಅವಕಾಶ ಸಿಕ್ಕರೆ ಮನನ್ ವೊಹ್ರಾ, ಸರ್ಫರಾಜ್ ಖಾನ್, ಪಾರ್ಥಿವ್ ಪಟೇಲ್ ಕೂಡ ಉತ್ತಮ ರನ್ ಪೇರಿಸಬಲ್ಲರು.

ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಂದೀಪ್ ಸಿಂಗ್ ಮಿಂಚಿದ್ದಾರೆ.

ಮುಂಬೈ ಇಂಡಿಯನ್ಸ್‌ನಲ್ಲಿ ಹೆಸರಾಂತ ಆಟಗಾರರಿದ್ದಾರೆ. ನಾಯಕ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಎವಿನ್ ಲೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಜೆಪಿ ಡುಮಿನಿ ತಂಡದ ಬ್ಯಾಟಿಂಗ್ ಶಕ್ತಿಗಳು.

ಸ್ಪಿನ್ನರ್‌ಗಳ ಮೇಲೆ ಹೊಣೆ

ಸ್ಪಿನ್ನರ್‌ಗಳ ಮೇಲೆ ಹೊಣೆ

ಬೌಲಿಂಗ್ ನಿರ್ವಹಣೆ ಎರಡೂ ತಂಡಗಳಿಗೆ ದೊಡ್ಡ ತಲೆನೋವಾಗಿದೆ. ಆರ್‌ಸಿಬಿ ಸಮಬಲದ ತಂಡವಾಗಿದೆ ಎಂದರೂ ಬೌಲಿಂಗ್ ವೈಫಲ್ಯ ಚಿಂತೆಗೀಡು ಮಾಡಿದೆ.

ಟಿಮ್ ಸೌಥಿ, ಉಮೇಶ್ ಯಾದವ್ ವೇಗದ ಬೌಲಿಂಗ್‌ನ ನೇತೃತ್ವ ವಹಿಸಿಕೊಳ್ಳುತ್ತಾರೆ. ಉಮೇಶ್ ಕಳೆದ ಪಂದ್ಯದಲ್ಲಿ ತೀರಾ ದುಬಾರಿಯಾಗಿದ್ದರು. ಕುಲ್ವಂತ್ ಖೆಜ್ರೋಲಿಯಾ ಬೌಲಿಂಗ್‌ ನಿಖರತೆ ಸಾಧಿಸಿಲ್ಲ. ಯಜುವೇಂದ್ರ ಚಾಹಲ್ ಆರ್‌ಸಿಬಿಯ ಪ್ರಮುಖ ಬೌಲಿಂಗ್ ಶಕ್ತಿ.

ಮುಂಬೈ ತಂಡದಲ್ಲಿ ಮಯಂಕ್ ಮಾರ್ಖಂಡೆ ಸ್ಪಿನ್‌ ದಾಳಿ ಚುರುಕಾಗಿದೆ. ಜಸ್‌ ಪ್ರೀತ್ ಬೂಮ್ರಾ, ಮುಸ್ತಿಫಿಜುರ್ ರೆಹಮಾನ್, ಅಕಿಲ ಧನಂಜಯ, ಮಿಷೆಲ್ ಮೆಕ್‌ಕ್ಲೆಂಗ್‌ಹಾನ್, ಬೆನ್ ಕಟ್ಟಿಂಗ್‌ ಪರಿಣಾಮಕಾರಿಯಾಗಬೇಕಿದೆ.

ಆರ್‌ಸಿಬಿಯಲ್ಲಿ ಹೆಚ್ಚು ಆಲ್‌ರೌಂಡರ್‌ಗಳು

ಆರ್‌ಸಿಬಿಯಲ್ಲಿ ಹೆಚ್ಚು ಆಲ್‌ರೌಂಡರ್‌ಗಳು

ಆರ್‌ಸಿಬಿಗೆ ಕ್ರಿಸ್ ವೋಕ್ಸ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಕೋರೆ ಆಂಡರ್ಸನ್, ಕಾಲಿನ್ ಡಿ ಗ್ರಾಂಡ್ ಹೋಮ್ ಅವರಂತಹ ಆಲ್‌ರೌಂಡರ್‌ಗಳ ಬಲವಿದೆ.

ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಸಹೋದರರೇ ಪ್ರಮುಖ ಆಲ್‌ರೌಂಡರ್‌ಗಳು. ಉಳಿದಂತೆ ಕೀರನ್ ಪೊಲಾರ್ಡ್ ಬೌಲಿಂಗ್‌ನಲ್ಲಿಯೂ ನೆರವಾಗಬಲ್ಲರು.

ನಾಯಕರ ನಡುವೆ ಗೆಲುವು ಯಾರದ್ದು?

ನಾಯಕರ ನಡುವೆ ಗೆಲುವು ಯಾರದ್ದು?

ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ, ಉತ್ತಮ ಲಯ ಕಂಡುಕೊಳ್ಳುವ ಭರವಸೆ ಮೂಡಿಸಿದ್ದಾರೆ. ಮುಂಬೈ ನಾಯಕನ ಸ್ಥಿತಿ ಹಾಗಿಲ್ಲ. ಮೂರೂ ಪಂದ್ಯಗಳಲ್ಲಿ ರೋಹಿತ್ ಉತ್ತಮ ರನ್ ಕಲೆಹಾಕಿಲ್ಲ. ಈ ಇಬ್ಬರ ನಡುವೆ ಯಾರು ಮಿಂಚುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಆರ್‌ಸಿಬಿಗೆ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ವೈಫಲ್ಯ ಹಿನ್ನಡೆ ಉಂಟುಮಾಡಿದೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಮೆಕಲಮ್, ನಂತರದ ಎರಡೂ ಪಂದ್ಯಗಳಲ್ಲಿ ಆರಂಭದಲ್ಲೇ ವಿಕೆಟ್ ಚೆಲ್ಲಿದ್ದರು. ಮುಂಬೈ ತಂಡದಲ್ಲಿ ಪೊಲಾರ್ಡ್ ಆಟದ ಸೊಬಗನ್ನು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿಲ್ಲ.

ಅಂಕಿ ಅಂಶದಲ್ಲಿ ಮುಂಬೈ ಮುಂದೆ

ಅಂಕಿ ಅಂಶದಲ್ಲಿ ಮುಂಬೈ ಮುಂದೆ

ಐಪಿಎಲ್ ಇತಿಹಾಸದ ಅಂಕಿ-ಅಂಶ ತೆರೆದು ನೋಡಿದರೆ ಆರ್‌ಸಿಬಿ, ಮುಂಬೈ ತಂಡದ ಎದುರು ದುರ್ಬಲವಾಗಿ ಕಾಣುತ್ತದೆ. ಆರ್‌ಸಿಬಿ ವಿರುದ್ಧ ಮುಂಬೈ ಸವಾರಿ ಮಾಡಿದ್ದೇ ಹೆಚ್ಚು.

ಇದುವರೆಗೂ ಮುಂಬೈ ಮತ್ತು ಆರ್‌ಸಿಬಿ 21 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಆರ್‌ಸಿಬಿಗೆ ಗೆಲುವು ಒಲಿದಿರುವುದು ಕೇವಲ 8 ಬಾರಿ.

ವಾಂಖೇಡೆಯಲ್ಲಿ ಮುಂಬೈ 4 ಬಾರಿ ಆರ್‌ಸಿಬಿ ವಿರುದ್ಧ ಗೆದ್ದಿದ್ದರೆ, 3 ಬಾರಿ ಆರ್‌ಸಿಬಿ ಗೆಲುವಿನ ನಗೆ ಬೀರಿದೆ.

ಯಾರಿಗೆ ಸಿಗಬಹುದು ಆಡುವ ಅವಕಾಶ?

ಯಾರಿಗೆ ಸಿಗಬಹುದು ಆಡುವ ಅವಕಾಶ?

ಗಾಯಾಳು ನಥಾನ್ ಕೌಲ್ಟರ್‌ನೈಲ್ ಬದಲಿಗೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿರುವ ಕೋರಿ ಆಂಡರ್‌ಸನ್ ಅವರಿಗೆ ಸ್ಥಾನ ಕಲ್ಪಿಸಬಹುದು.

ಆರ್‌ಸಿಬಿಯಲ್ಲಿ ವಿಕೆಟ್ ಕೀಪರ್‌ಗಳಿಗೆ ಕೊರತೆಯಿಲ್ಲ. ಬ್ರೆಂಡನ್ ಮೆಕಲಮ್ ಅಥವಾ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರೆ, ಕ್ವಿಂಟನ್ ಡಿ ಕಾಕ್ ಸ್ಥಾನಕ್ಕೆ ಕೋರಿ ಆಂಡರ್‌ಸನ್ ಅಥವಾ ಕೊಲಿನ್ ಗ್ರಾಂಡ್‌ ಹೋಮ್‌ ಅವರನ್ನು ಆಡಿಸಬಹುದು. ಇದರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಶಕ್ತಿ ಹೆಚ್ಚುತ್ತದೆ. ಇಂಗ್ಲೆಂಡ್‌ನ ಮೊಯಿನ್ ಅಲಿ ಬ್ಯಾಟಿಂಗ್‌ ಜತೆಗೆ ಸ್ಪಿನ್ ವಿಭಾಗದಲ್ಲಿ ಕಾಣಿಕೆ ನೀಡಬಲ್ಲರು.

ಮುಂಬೈ ತಂಡ ಕೊನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದ್ದರೂ ಎದುರಾಳಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತ್ತು. ಸೂರ್ಯಕುಮಾರ್ ಯಾದವ್‌ಗೆ ಬಡ್ತಿ ನೀಡಿದ್ದು ಆ ಪಂದ್ಯದಲ್ಲಿ ನೆರವಾಗಿತ್ತು. ಕೃಣಾಲ್ ಪಾಂಡ್ಯ ಕೊನೆಯಲ್ಲಿ ಅಬ್ಬರದ ಆಟವಾಡಿದರೂ ಅವರಿಗೆ ಹೆಚ್ಚು ಎಸೆತಗಳನ್ನು ಎದುರಿಸಲು ಅವಕಾಶ ಸಿಗುತ್ತಿಲ್ಲ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಜೆಪಿ ಡುಮಿನಿಯನ್ನು ಆಡಿಸಿದರೆ ಮುಂಬೈಗೆ ಹೆಚ್ಚು ಲಾಭವಾಗಲಿದೆ. ಡುಮಿನಿ ಸ್ಪಿನ್‌ ಕೈಚಳಕದಲ್ಲಿ ವಿಕೆಟ್ ಕೀಳಬಲ್ಲ ತಾಕತ್ತು ಹೊಂದಿದ್ದಾರೆ.

ಆರ್‌ಸಿಬಿಗೆ ಅನುಭವಿಗಳ ಬಲ

ಆರ್‌ಸಿಬಿಗೆ ಅನುಭವಿಗಳ ಬಲ

ಎರಡೂ ತಂಡಗಳು ಬಲಿಷ್ಠವಾಗಿದ್ದರೂ, ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿವೆ. ಮುಂಬೈ ತಂಡದೊಂದಿಗೆ ಹೋಲಿಸಿದರೆ, ಹೆಚ್ಚು ಅನುಭವಿಗಳನ್ನು ಮತ್ತು ಖ್ಯಾತನಾಮರನ್ನು ಹೊಂದಿರುವುದು ಆರ್‌ಸಿಬಿ. ತಂಡಗಳ ಬಲಾಬಲದಲ್ಲಿ ಮುಂಬೈಗಿಂತ ಹೆಚ್ಚು ತೂಕ ಆರ್‌ಸಿಬಿ ಕಡೆ ವಾಲುತ್ತದೆ.

ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ತಂಡಕ್ಕೆ ತವರಿನ ಪಂದ್ಯ ಚೈತನ್ಯ ನೀಡಲಿದೆಯೋ ಅಥವಾ ಅಂಕಪಟ್ಟಿಯ ತಳಭಾಗದಲ್ಲಿಯೇ ಉಳಿದುಕೊಳ್ಳುವಂತೆ ಆರ್‌ಸಿಬಿ ತಂಡ ಆರ್ಭಟ ತೋರಲಿದೆಯೋ ಕಾದುನೋಡಬೇಕು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 17, 2018, 13:07 [IST]
Other articles published on Apr 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ