
ಕರಾಚಿ: ಕಳೆದ ತಿಂಗಳು ಮುಕ್ತಾಯಗೊಂಡ, ಪಾಕಿಸ್ತಾನ ತಂಡದ ಇಂಗ್ಲೆಂಡ್ ಪ್ರವಾಸ ಸರಣಿಗಾಗಿ ಪ್ರಟಿಸಲಾಗಿದ್ದ 29 ಮಂದಿಯ ತಂಡದಲ್ಲಿ ಪಾಕ್ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರನ್ನೂ ಹೆಸರಿಸಲಾಗಿತ್ತು. ಮೂರು ಪಂದ್ಯಗಳ ಟೆಸ್ಟ್ ಮತ್ತು ಮೂರು ಪಂದ್ಯಗಳ ಟಿ20ಐ ಪ್ರವಾಸ ಇದಾಗಿತ್ತು.
ಪಾಕಿಸ್ತಾನ ರಾಷ್ಟ್ರೀಯ ತಂಡದಿಂದ ಸುಮಾರು 8 ತಿಂಗಳ ಕಾಲ ಕಡೆಗಣಿಸಿದ ಬಳಿಕ ಸರ್ಫರಾಜ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತಾದರೂ ಇಂಗ್ಲೆಂಡ್ ಪ್ರವಾಸದಲ್ಲಿ ಸಹ್ಮದ್ ಅವರನ್ನು ಸಂಪೂರ್ಣ ಮೂಲೆಗುಂಪು ಮಾಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಕಡೇಯ ಟಿ20ಐನಲ್ಲಿ ಮಾತ್ರ ಸರ್ಫರಾಜ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಲಾಗಿತ್ತು.
ಇಂಗ್ಲೆಂಡ್ ಪ್ರವಾಸದಲ್ಲಿ ಕಡೆಗಣಿಸಿದ್ದಕ್ಕೆ ಸರ್ಫರಾಜ್‌ಗೆ ಬೇಸರವಾಗಿದೆ ಎಂದು ಪಾಕ್ ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆದಾರ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ. 'ಕಡೇಯ ಪಂದ್ಯ ಆಡು ಎಂದಾಗ ಆತ (ಸರ್ಫರಾಜ್) ನಿರಾಸರಿಸಲಿಲ್ಲ. ಆದರೆ ನಿಜ, ಕೊನೇ ಪಂದ್ಯ ಆಡಲು ಹೇಳಿದಾಗ ಅವರಿಗೆ ಬೇಸರವಾಗಿರುತ್ತದೆ,' ಎಂದು ಜಿಯೋ ನ್ಯೂಸ್ ಜೊತೆ ಮಿಸ್ಬಾ ಹೇಳಿಕೊಂಡಿದ್ದಾರೆ.
'ಒಂದು ವೇಳೆ ನಾನು ಆತನ ಜಾಗದಲ್ಲಿದ್ದರೆ ನನಗೂ ಹೀಗೇ ಅನ್ನಿಸುತ್ತಿತ್ತು. ಪ್ರವಾಸದ ಆರಂಭಿಕ ಪಂದ್ಯಗಳಲ್ಲಿ ಆಡಿಸದೆ ಕೊನೇಯ ಪಂದ್ಯ ಆಡಲು ಹೇಳಿದಾಗ ಯಾವುದೇ ಆಟಗಾರನಿಗೂ ತನ್ನನ್ನು ಮೂಲೆಗುಂಪು ಮಾಡಿದಂತೆ ಅನ್ನಿಸುತ್ತದೆ,' ಎಂದು ಮಿಸ್ಬಾ ಹೇಳಿದರು. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿ 1-0ಯಿಂದ ಇಂಗ್ಲೆಂಡ್ ವಶವಾಗಿದ್ದರೆ, ಟಿ20 ಸರಣಿ 1-1ರಿಂದ ಸಮಬಲಗೊಂಡಿತ್ತು.