
ಅಫ್ಘಾನಿಸ್ತಾನ ವಿರುದ್ಧ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ
2022ರ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ 71ನೇ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸುವ ಮೂಲಕ ತಮ್ಮ 1,020 ದಿನಗಳ ಶತಕದ ಬರವನ್ನು ಕೊನೆಗೊಳಿಸಿದರು. ಅವರು 147.59ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 276 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿ ಮುಗಿಸಿದರು.
"ತಮ್ಮ ಅತ್ಯುತ್ತಮ ಆಟಗಾರ ರನ್ ಗಳಿಸಿ ತಂಡವನ್ನು ಆತ್ಮವಿಶ್ವಾಸದಲ್ಲಿರಿಸಿದಾಗ ಭಾರತಕ್ಕೆ ಒಳ್ಳೆಯದು. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಾಗ ಭಾರತ ತಂಡದ ಗಮನವನ್ನು ಬದಲಾಯಿಸಿದ ಆಟಗಾರ. ಅವರು ರನ್ ಗಳಿಸುತ್ತಿರುವುದು ತಂಡಕ್ಕೆ ಸಂತೋಷವಾಗಿದೆ," ಎಂದು ಮಿಚೆಲ್ ಜಾನ್ಸನ್ ANIಗೆ ತಿಳಿಸಿದರು.

ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪ್ರಸ್ತುತ ಮೊಹಾಲಿಯಲ್ಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು ಎದುರಿಸಲು ಸಿದ್ಧವಾಗಿದೆ.
"ಭಾರತ ತಂಡ ಕಠಿಣ ಪರಿಸ್ಥಿತಿಯಲ್ಲಿ ಸರಣಿಯನ್ನು ಗೆಲ್ಲಲು ನೋಡುತ್ತಿರಬೇಕು. ಇದು ಅವರಿಗೆ ವಿಶ್ವಕಪ್‌ಗೆ ಹೋಗುವ ಆತ್ಮವಿಶ್ವಾಸವನ್ನು ನೀಡುತ್ತದೆ. ಅವರು ಗಟ್ಟಿಯಾದ ಮತ್ತು ಸ್ಥಿರವಾದ ತಂಡವನ್ನು ಹೊಂದಿರಬೇಕು. ಇದು ಉತ್ತಮ ಸರಣಿಯಾಗಲಿದೆ," ಎಂದು ಮಿಚೆಲ್ ಜಾನ್ಸನ್ ತಿಳಿಸಿದರು.

ಸೆಪ್ಟೆಂಬರ್ 20ರಂದು ಭಾರತ vs ಆಸ್ಟ್ರೇಲಿಯ ಮೊದಲ ಟಿ20
ಭಾರತವು ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಮೂರು ಟಿ20 ಪಂದ್ಯಗಳ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಎರಡನೇ ಪಂದ್ಯ ಮತ್ತು ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಪೂರ್ಣಗೊಳಿಸುತ್ತದೆ.
ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ಅವಕಾಶಗಳ ಕುರಿತು ಮಾತನಾಡಿದ ಆಸ್ಟ್ರೇಲಿಯ ಮಿಚೆಲ್ ಜಾನ್ಸನ್, ವಿಶ್ವಕಪ್ ಟೂರ್ನಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ಅಕ್ಟೋಬರ್ 23ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ
"ಟಿ20 ವಿಶ್ವಕಪ್‌ಗೆ ಬಂದಾಗ, ನೀವು ಆ ಕ್ಷಣವನ್ನು ಆನಂದಿಸುತ್ತೀರಿ, ನೀವು ಅದರ ಬಗ್ಗೆ ಗಮನಹರಿಸಬೇಕು. ಭಾರತ ದೊಡ್ಡ ತಂಡ, ಭಾರತೀಯರು ಐಪಿಎಲ್‌ನಿಂದಾಗಿ ದೊಡ್ಡ ಪಂದ್ಯಗಳನ್ನು ಆಡುತ್ತಾರೆ. ಹೆಚ್ಚಿನ ಒತ್ತಡದಿಂದ ಹೆಚ್ಚಿನ ಪ್ರೇಕ್ಷಕರ ಮುಂದೆ ಆಡುತ್ತಾರೆ. ಆ ಎಲ್ಲಾ ಸಂಗತಿಗಳು (ಏಷ್ಯಾ ಕಪ್ ಹೀನಾಯ ಪ್ರದರ್ಶನ) ಅವರ ಹಿಂದೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ," ಮಿಚೆಲ್ ಜಾನ್ಸನ್ ಹೇಳಿದರು.
ಐಸಿಸಿ ಪುರುಷರ ಟಿ20 ವಿಶ್ವಕಪ್ ಅಕ್ಟೋಬರ್ 16ರಂದು ಪ್ರಾರಂಭವಾಗಲಿದ್ದು, ನವೆಂಬರ್ 13ರವರೆಗೆ ನಡೆಯಲಿದೆ. ಅಕ್ಟೋಬರ್ 23ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿದ್ದು, ಆ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿವೆ.