ವಿಶ್ವಟಿ20 ಹೀರೋ ಬ್ರಾಥ್ ವೈಟ್ ಈಗ ಡೆಲ್ಲಿ ಸರದಾರ!

Posted By:

ಬೆಂಗಳೂರು, ಏಪ್ರಿಲ್ 05: ವಿಶ್ವ ಟ್ವೆಂಟೀ20 ಟೂರ್ನಮೆಂಟ್ ಮುಗಿದರೂ ಫೈನಲ್ ಪಂದ್ಯದ ಆ ಕೊನೆ ಓವರ್ ಮರೆಯಲು ಸಾಧ್ಯವಿಲ್ಲ. ಸ್ಟುವರ್ಟ್ ಬ್ರಾಡ್ ಗೆ ಯುವರಾಜ್ ಸಿಂಗ್ ಕೊಟ್ಟ ಹೊಡೆತವನ್ನು ಮತ್ತೆ ನೆನಪಿಸುವಂತೆ ಮಾಡಿದ ಬ್ರಾಥ್ ವೈಟ್ ಈಗ ಸಿಕ್ಸರ್ ಕಿಂಗ್ ಆಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್ ) 9ನೇ ಆವೃತ್ತಿಗಾಗಿ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯುವಾಗ ಕಾರ್ಲೊಸ್ ಬ್ರಾಥ್ ವೈಟ್ ಗೆ ಭಾರಿ ಬೇಡಿಕೆ ಹುಟ್ಟುಕೊಂಡಿತ್ತು. ಯಾರಿದು ಬ್ರಾಥ್ ವೈಟ್ ಎಂದು ಎಲ್ಲರೂ ಹುಬ್ಬೇರಿಸಿದ್ದರು.

ಭಾರಿ ಪೈಪೋಟಿ ನಡುವೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಬ್ರಾಥ್ ವೈಟ್ ರನ್ನು ಕೋಟಿ ರು ($ 618,000) ಕೊಟ್ಟು ಖರೀದಿಸಿತ್ತು. ಈಗ ಬ್ರಾಥ್ ವೈಟ್ ಎಂದು ಯಾರೂ ಕೇಳುವಂತಿಲ್ಲ. ವಿಶ್ವ ಟಿ20 ಫೈನಲ್ ನಂತರ ವಿಂಡೀಸ್ ನ ದೈತ್ಯ ಪ್ರತಿಭೆ ಜಗತ್ತಿಗೆ ಅನಾವರಣಗೊಂಡಿದೆ.

2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್ ಸಿಂಗ್‌ ಅವರು ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ವಿಶ್ವ ಟಿ20ಯಲ್ಲಿ ಬೆನ್ ಸ್ಟೋಕ್ಸ್ ಗೆ ಬ್ರಾಥ್ ವೈಟ್ ಆಘಾತ ನೀಡಿದರು. ಎರಡೂ ಬಾರಿ ಇಂಗ್ಲೆಂಡಿನ ಬೌಲರ್ ಗಳೆ ಪೆಟ್ಟು ತಿಂದರು.

Carlos Brathwaite: Delhi Daredevils IPL All Rounder

ಆಲ್ ರೌಂಡರ್ ಬ್ರಾಥ್‌ ವೈಟ್: ಬ್ಯಾಟಿಂಗ್‌ನಲ್ಲಿ ಮಿಂಚುವುದಕ್ಕೂ ಮೊದಲು ಬೌಲಿಂಗ್‌ನಲ್ಲಿ 4 ಓವರ್‌ನಲ್ಲಿ 23 ರನ್ ವೆಚ್ಚದಲ್ಲಿ 3 ವಿಕೆಟ್ ಕಬಳಿಸಿದ್ದರು.

ಬಾರ್ಬಡಾಸ್‌ನ ಆಲ್‌ರೌಂಡರ್ ಬ್ರಾಥ್‌ವೈಟ್ 2011ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿರಿಸಿದ್ದು, 8 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಗಳಿಸಿದ್ದರಿಂದ ಅದೇ ವರ್ಷ ಬಾಂಗ್ಲಾದೇಶದ ವಿರುದ್ಧ ಟ್ವೆಂಟಿ-20 ತಂಡದಲ್ಲಿ ಸ್ಥಾನ ಪಡೆದುಕೊಂಡರು. ಬಾಂಗ್ಲಾದ ವಿರುದ್ಧವೇ ಏಕದಿನ ಪಂದ್ಯಕ್ಕೆ ಪಾದಾರ್ಪಣೆಗೈದ ಬ್ರಾಥ್‌ವೈಟ್ 2016ರ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರವೇಶ ಪಡೆದಿದ್ದರು.

ಬ್ರಾಥ್‌ವೈಟ್ 7 ಏಕದಿನಗಳಲ್ಲಿ 71 ರನ್ ಗಳಿಸಿದ್ದು, 18 ರನ್ ಗರಿಷ್ಠ ಸ್ಕೋರ್. ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. 8 ಟಿ-20 ಆಡಿರುವ ಅವರು ಒಟ್ಟು 59 ರನ್ ಗಳಿಸಿದ್ದು, ಔಟಾಗದೆ 34 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಆಂಗ್ಲರ ವಿರುದ್ಧದ ಫೈನಲ್ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿರುವ ಬ್ರಾಥ್‌ವೈಟ್ 1970 ಹಾಗೂ 1980ರಲ್ಲಿ ವಿಂಡೀಸ್‌ನ ಗತ ವೈಭವವನ್ನು ನೆನಪಿಸಿದ್ದಾರೆ.

ಈಗ ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಬ್ರಾಥ್‌ವೈಟ್ ಆಡಲಿದ್ದಾರೆ. ಏಪ್ರಿಲ್ 9ರಿಂದ ಆರಂಭವಾಗಲಿರುವ ಐಪಿಎಲ್ ಪಂದ್ಯದಲ್ಲೂ ಮಿಂಚುವ ನಿರೀಕ್ಷೆ ಹುಟ್ಟಿಸಿದ್ದಾರೆ.

Story first published: Tuesday, April 5, 2016, 12:41 [IST]
Other articles published on Apr 5, 2016
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ