ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು!

ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ 50ನೇ ಪಂದ್ಯದಲ್ಲಿ ಇಂದು ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡಕ್ಕೆ ಬೆಂಗಳೂರು ಬುಲ್ಸ್ 61-22 ಅಂತರದಲ್ಲಿ ಸೋಲುಣಿಸುವುದರ ಮೂಲಕ ಇತಿಹಾಸ ರಚಿಸಿದೆ.

ಅತ್ತ ಇಂದಿನ ಪಂದ್ಯದಲ್ಲಿ ತಮ್ಮ ತಂಡದ ಪ್ರಮುಖ ಆಟಗಾರ ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ದಬಾಂಗ್ ಡೆಲ್ಲಿ ಹೀನಾಯವಾದ ಸೋಲನ್ನು ಅನುಭವಿಸಿದೆ. ನವೀನ್ ಕುಮಾರ್ ಇಲ್ಲದ ದಬಾಂಗ್ ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ಆರ್ಭಟಕ್ಕೆ ನಲುಗಿ ಹೋಯಿತು ಎಂದು ಹೇಳಿದರೆ ತಪ್ಪಾಗಲಾರದು. ನವೀನ್ ಕುಮಾರ್ ಇಲ್ಲದೇ ಪಾಯಿಂಟ್ಸ್ ಗಳಿಸಲು ಹರಸಾಹಸ ಪಟ್ಟ ದಬಾಂಗ್ ಡೆಲ್ಲಿ ಬೆಂಗಳೂರು ಬುಲ್ಸ್ ಎದುರು 39 ಅಂಕಗಳ ಅಂತರದ ಹೀನಾಯ ಸೋಲನ್ನು ಅನುಭವಿಸಿತು.

ಇನ್ನು ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ 27 ಅಂಕಗಳನ್ನು ಕಲೆ ಹಾಕುವುದರ ಮೂಲಕ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ 20ಕ್ಕೂ ಹೆಚ್ಚಿನ ಅಂಕಗಳನ್ನು ಕಲೆ ಹಾಕಿದರು. ಬೆಂಗಳೂರು ಬುಲ್ಸ್ ತಂಡದ ಇತರೆ ಆಟಗಾರರಾದ ಭರತ್ 7 ಅಂಕಗಳು ಮತ್ತು ಚಂದ್ರನ್ ರಂಜಿತ್ 5 ಅಂಕಗಳನ್ನು ಕಲೆ ಹಾಕುವುದರ ಮೂಲಕ ಬೆಂಗಳೂರು ಬುಲ್ಸ್ ತಂಡಕ್ಕೆ ಆಸರೆಯಾದರು. ಬೆಂಗಳೂರು ಬುಲ್ಸ್ ತಂಡದ ರೈಡಿಂಗ್ ವಿಭಾಗ ಮಾತ್ರವಲ್ಲದೇ ಡಿಫೆನ್ಸ್ ವಿಭಾಗವೂ ಕೂಡ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಯಿತು.

ಅತ್ತ ದಬಾಂಗ್ ಡೆಲ್ಲಿ ತಂಡದ ಆಟಗಾರರಾದ ಅಶೋಕ್ ಮಲ್ಲಿಕ್ ಮತ್ತು ಅಜಯ್ ಠಾಕೂರ್ ತಲಾ 6 ಅಂಕಗಳನ್ನು ಗಳಿಸಿದ್ದು ಬಿಟ್ಟರೆ ಇತರೆ ಯಾವುದೇ ಆಟಗಾರರು ಕೂಡ ಹೇಳಿಕೊಳ್ಳುವಂತಹ ರೇಡಿಂಗ್ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಪಂದ್ಯದ ಮೊದಲಾರ್ಧದಲ್ಲಿ ಪವನ್ ಶೆರಾವತ್ ಅವರ ಸೂಪರ್ ರೈಡಿಂಗ್ ಮತ್ತು ಸೌರಭ್ ನಂದಲ್ ಅವರ ಅಮೋಘ ಟ್ಯಾಕಲ್ ನೆರವಿನಿಂದ ಬೆಂಗಳೂರು ಬುಲ್ಸ್ 4 ನಿಮಿಷಗಳು ಬಾಕಿ ಇರುವಾಗಲೇ ಮೊದಲನೇ ಆಲ್ ಔಟ್ ಮಾಡಿತು. ದಬಾಂಗ್ ಡೆಲ್ಲಿ ತಂಡದ ಆಟಗಾರ ನೀರಜ ನರ್ವಲ್ ತಲೆಯ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರಗುಳಿದು ಅಜಯ್ ಠಾಕೂರ್ ಕಣಕ್ಕಿಳಿದರೂ ಕೂಡ ದಬಂಗ್ ಡೆಲ್ಲಿ ತಂಡದ ಹಣೆಬರಹ ಬದಲಾಗಲಿಲ್ಲ. ಪಂದ್ಯದ ಮೊದಲಾರ್ಧದ ಅಂತಿಮ ನಿಮಿಷಗಳಲ್ಲಿ ಪವನ್ ಶೆರಾವತ್ ಅವರ ಅಮೋಘ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿತು. ಈ ಮೂಲಕ ಪಂದ್ಯದ ಮಧ್ಯಂತರದ ವೇಳೆಗೆ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧ 27-11 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.

ಇನ್ನು ಪಂದ್ಯದ ದ್ವಿತೀಯಾರ್ಧ ಸಂಪೂರ್ಣವಾಗಿ ಬೆಂಗಳೂರು ಬುಲ್ಸ್ ತಂಡದ ಪರವಾಗಿತ್ತು. ದಬಾಂಗ್ ಡೆಲ್ಲಿ ತಂಡದ ಕಳಪೆ ಡಿಫೆನ್ಸ್ ಬೆಂಗಳೂರು ಬುಲ್ಸ್ ತಂಡಕ್ಕೆ ಅಂಕಗಳ ಮೇಲೆ ಅಂಕಗಳನ್ನು ಕಲೆ ಹಾಕುವಂತೆ ಮಾಡಿಕೊಟ್ಟಿತು. ದ್ವಿತೀಯಾರ್ಧದ ಆರನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ತಂಡ ಮೊದಲನೇ ಆಲ್ ಔಟ್ ಮಾಡಿತು. ಹೀಗೆ ತನ್ನ ಕಳಪೆ ಆಟವನ್ನು ಮತ್ತೆ ಮುಂದುವರಿಸಿದ ದಬಾಂಗ್ ಡೆಲ್ಲಿ ತಂಡ 11ನೇ ನಿಮಿಷದಲ್ಲಿ ಮತ್ತೊಮ್ಮೆ ಆಲ್ ಔಟ್ ಆಗುವುದರ ಮೂಲಕ ಬೆಂಗಳೂರು ಬುಲ್ಸ್ ತಂಡದ ಮುಂದೆ ಮಂಕಾಯಿತು. ಪಂದ್ಯ ಮುಗಿಯಲು ಇನ್ನೂ 9 ನಿಮಿಷಗಳು ಬಾಕಿ ಇರುವಾಗಲೇ ಬೆಂಗಳೂರು ಬುಲ್ಸ್ ತಂಡ 50 ಅಂಕಗಳ ಗಡಿಯನ್ನು ದಾಟಿತ್ತು. ಇನ್ನು ಪಂದ್ಯ ಮುಗಿಯಲು ಇನ್ನೂ 2 ನಿಮಿಷಗಳು ಬಾಕಿ ಇರುವಾಗ ದಬಾಂಗ್ ಡೆಲ್ಲಿ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿದ ಬೆಂಗಳೂರು ಬುಲ್ಸ್ ತಂಡ 40 ಅಂಕಗಳ ಮುನ್ನಡೆಯನ್ನು ಸಾಧಿಸುವುದರ ಮೂಲಕ ಪಂದ್ಯದುದ್ದಕ್ಕೂ ದಬಾಂಗ್ ಡೆಲ್ಲಿ ತಂಡಕ್ಕೆ ಎಲ್ಲಿಯೂ ಕೂಡಾ ಪುಟಿದೇಳುವ ಅವಕಾಶವನ್ನು ನೀಡದೇ ಅಂತಿಮವಾಗಿ ಬರೋಬ್ಬರಿ 39 ಅಂಕಗಳ ಅಂತರದಿಂದ ಜಯವನ್ನು ಸಾಧಿಸಿತು.

ದಬಾಂಗ್ ಡೆಲ್ಲಿ ತಂಡದ ವಿರುದ್ಧ ಬೆಂಗಳೂರು ಬುಲ್ಸ್ ಸಾಧಿಸಿದ ಈ ಜಯ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿಯೇ ಎರಡನೆಯ ಅತಿ ದೊಡ್ಡ ಗೆಲುವು ಎನಿಸಿಕೊಂಡರೆ, ಈ ಪಂದ್ಯದ ಗೆಲುವಿನ ಮೂಲಕ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, January 12, 2022, 23:15 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X