ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್‌ ಭಾಸ್ಕರ್ ಗಾಣಿಗ

Vishwanath B Ganiga

ಕುಂದಾಪುರ ತಾಲೂಕಿನ ದೇವಲ್ಕುಂದದ ಬಾಳಿಕೆರೆಯ ವಿಶ್ವನಾಥ್ ಭಾಸ್ಕರ್ ಗಾಣಿಗ ಹಳ್ಳಿಯಲ್ಲಿ ಬೆಳೆದು, ತನ್ನ ಅಮೋಘ ಸಾಧನೆಯ ಮೂಲಕ ಜಗಕ್ಕೆ ಪಸರಿಸಿದ ಅಪ್ಪಟ್ಟ ಗ್ರಾಮೀಣ ಪ್ರತಿಭೆ.
ಬಡತನವನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡು, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಗುರಿ ಸಾಧಿಸಲೇಬೇಕೆಂಬ ಏಕಾಗ್ರತೆಯಿಂದ ಶಹಬ್ಬಾಸ್‌ಗಿರಿ ಪಡೆದ ಸಾಧಕ.

ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪವರ್‌ಲಿಫ್ಟಿಂಗ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಪದಕವನ್ನ ಬೇಟೆಯಾಡಿರುವ ವಿಶ್ವನಾಥ್ ಗಾಣಿಗ ಯಶೋಗಾಥೆಯನ್ನ ಈ ಬರಹದ ಮೂಲಕ ಓದುಗರಿಗೆ ಅರ್ಪಿಸಲಾಗುತ್ತಿದೆ.

ಮೈಖೇಲ್ ಕನ್ನಡದಲ್ಲಿ ''ನಮ್ಮೂರ ಪ್ರತಿಭೆ'' ವಿಶೇಷ ಸರಣಿ ಲೇಖನದಲ್ಲಿ ಮೊದಲ ಸ್ಥಳೀಯ ಕ್ರೀಡಾರತ್ನವಾಗಿ ವಿಶ್ವನಾಥ್ ಭಾಸ್ಕರ್ ಗಾಣಿಗ ಕುರಿತು ನಿಮಗೆ ಮತ್ತಷ್ಟು ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿದೆ.

ಬಾಳಿಕೆರೆಯ ಚಿನ್ನದ ತಾವರೆ ಹೂ ವಿಶ್ವನಾಥ್ ಗಾಣಿಗ

ಬಾಳಿಕೆರೆಯ ಚಿನ್ನದ ತಾವರೆ ಹೂ ವಿಶ್ವನಾಥ್ ಗಾಣಿಗ

ಅಪ್ಪಟ ಹಳ್ಳಿ ಪ್ರತಿಭೆಯಾಗಿರುವ ವಿಶ್ವನಾಥ್ ಗಾಣಿಗ ಬಡಕುಟುಂಬದಲ್ಲಿ ಬೆಳೆದ ಬಂದಂತಹ ಕ್ರೀಡಾಪಟು. ಕುಂದಾಪುರದ ದೇವಲ್ಕುಂದ ಗ್ರಾಮದ ನಿವಾಸಿ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿ ಮೂವರು ಮಕ್ಕಳಲ್ಲಿ ಕಿರಿಯ ಪುತ್ರ. ಬಾಲ್ಯದಲ್ಲಿ ಬಡತನ ಸಾಕಷ್ಟು ಅಡೆತಡೆಗಳನ್ನ ಒಡ್ಡಿದರೂ ಜಗ್ಗದೆ ಮುಂದೆ ಸಾಗಿದ ಪವರ್‌ಲಿಫ್ಟರ್.

ಶಾಲಾ ದಿನಗಳಲ್ಲೇ, ಅದ್ರಲ್ಲೂ ಬೇಸಿಗೆ ರಜೆಯಲ್ಲಿ ಕೆಲಸವನ್ನು ಮಾಡುವ ಮೂಲಕ ತನ್ನ ಕುಂಟುಬಕ್ಕೆ ತನ್ನದೇ ಆದ ಆರ್ಥಿಕ ಕೊಡುಗೆಯನ್ನ ನೀಡುತ್ತಿದ್ದರು. 10ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ಕುಂದಾಪುರದ ಹೋಟೆಲ್ ಒಂದರಲ್ಲಿಯೂ ವಿಶ್ವನಾಥ್ ಕೆಲಸ ಮಾಡಿದ್ದಾರೆ.

10ನೇ ತರಗತಿಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆದ ಇವರಿಗೆ ಪಿಯುಸಿ ವಿದ್ಯಾಭ್ಯಾಸ ಭರಿಸುವುದು ಕಷ್ಟವಾಗಿತ್ತು. ಓದಿನ ಜೊತೆಗೆ ತಂದೆಗೆ ಆರ್ಥಿಕ ಸಹಾಯವಾಗಿ ನಿಲ್ಲಬೇಕೆಂಬ ಛಲವು ಇತ್ತು. ಹೀಗಾಗಿ ವಿಶ್ವನಾಥ್ ಬಿಡುವಿನ ಸಮಯದಲ್ಲಿ, ರಜಾ ದಿನಗಳಲ್ಲಿ ಮರ ಕಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ವಿಶ್ವನಾಥ್ ಕಡಿದ ಮರದ ದೊಡ್ಡ ದೊಡ್ಡ ದಿಮ್ಮಿಗಳನ್ನ ಲಾರಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು.

ಪವರ್‌ಲಿಫ್ಟಿಂಗ್‌ಗೆ ಪ್ರೇರಣೆಯಾಯ್ತು ಈ ಭಾರ ಎತ್ತುವ ಕೆಲಸ

ಪವರ್‌ಲಿಫ್ಟಿಂಗ್‌ಗೆ ಪ್ರೇರಣೆಯಾಯ್ತು ಈ ಭಾರ ಎತ್ತುವ ಕೆಲಸ

ಮರದ ದಿಮ್ಮಿಗಳನ್ನ ಲಾರಿಗೆ ಲೋಡ್‌ ಮಾಡುತ್ತಿದ್ದ ವಿಶ್ವನಾಥ್ ಗಾಣಿಗಗೆ ತನ್ನ ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ಕೆಲಸವೇ ಪವರ್‌ ಲಿಫ್ಟಿಂಗ್‌ನಂತಹ ಕಠಿಣ ಕ್ರೀಡೆಗೆ ಸಹಕಾರಿಯಾಯಿತು. ಹೀಗಾಗಿಯೇ 2009ರಲ್ಲಿ ಅಂಕದಕಟ್ಟೆಯ ಪ್ರಶಾಂತ ಶೇರ್‌ಗಾರ್ ಮಾರ್ಗದರ್ಶನದಲ್ಲಿ ಪವರ್‌ಲಿಫ್ಟಿಂಗ್ ತರಬೇತಿ ಆರಂಭಿಸಿದ ವಿಶ್ವನಾಥ್, ನಂತರ ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ತೆರಳಿದರು.

ಓದಿನ ಜೊತೆಗೆ ಕೆಲಸವನ್ನೂ ಮಾಡುತ್ತ ಅಂತಿಮವಾಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸವನ್ನು ಸಹ ಪಡೆದುಕೊಂಡರು.

ತನ್ನ ಗುರಿ ಸಾಧಿಸಲು ಐಟಿ ಕಂಪನಿಯನ್ನು ತೊರೆದ ವಿಶ್ವನಾಥ್‌ ಗಾಣಿಗ

ತನ್ನ ಗುರಿ ಸಾಧಿಸಲು ಐಟಿ ಕಂಪನಿಯನ್ನು ತೊರೆದ ವಿಶ್ವನಾಥ್‌ ಗಾಣಿಗ

5 ವರ್ಷಗಳ ಕಾಲ ಐಟಿ ಉದ್ಯಮದಲ್ಲಿ ಕೆಲಸ ಮಾಡಿದ್ದ ವಿಶ್ವನಾಥ್ ಗಾಣಿಗ ತನ್ನ ಗುರಿಯನ್ನ ತಲುಪಲು ಮತ್ತು ಪವರ್‌ಲಿಫ್ಟಿಂಗ್‌ನಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಪಣತೊಟ್ಟು ಐಟಿ ಕಂಪನಿಯನ್ನೇ ತೊರೆದರು. ಪವರ್‌ಲಿಫ್ಟಿಂಗ್‌ನಲ್ಲಿ ಹೆಚ್ಚಿನದನ್ನು ಸಾಧಿಸಲು ಬಯಸಿದ್ದರಿಂದ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ ಡೆಡ್‌ಲಿಫ್ಟ್ ಮಾಡಲು ತನ್ನ ಚಿತ್ತ ನೆಟ್ಟರು.

ಕಡಿಮೆ ಸಮಯದಲ್ಲೇ ಅನೇಕ ಪದಕಗಳನ್ನ ತನ್ನದಾಗಿಸಿಕೊಂಡಿರುವ ವಿಶ್ವನಾಥ್ ಗಾಣಿಗ ಅನೇಕ ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಕಾಮನ್‌ವೆಲ್ತ್‌ಗೇಮ್ಸ್‌, ನ್ಯಾಷನಲ್ ಚಾಂಪಿಯನ್‌ಶಿಪ್‌ಗಳಲ್ಲಿ ಅನೇಕ ಪದಕಗಳಿಗೆ ಕೊರಳೊಡ್ಡಿದ್ದಾರೆ. ನ್ಯಾಷನಲ್‌ ಇವೆಂಟ್‌ಗಳಲ್ಲಿ ದಾಖಲೆಯ ಭಾರ ಎತ್ತುವ ಮೂಲಕ ಇಡೀ ದೇಶವೇ ಒಮ್ಮೆ ಇವರತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.

ವಿಶ್ವನಾಥ್ ಗಾಣಿಗ ಇದುವರೆಗೂ ಯಾವ ಸ್ಪರ್ಧೆಯಲ್ಲಿ, ಎಷ್ಟು ಪದಕಗಳನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ, ಅವರ ಸಾಧನೆ ಏನು ಎಂಬುದನ್ನ ಮುಂದೆ ತಿಳಿಯಬಹುದು.

ಅಂತರಾಷ್ಟ್ರೀಯ ಪವರ್ ಲಿಫ್ಟರ್ ಆಗಿರುವ ವಿಶ್ವನಾಥ್ ಗಾಣಿಗ ದಾಖಲೆ

ಅಂತರಾಷ್ಟ್ರೀಯ ಪವರ್ ಲಿಫ್ಟರ್ ಆಗಿರುವ ವಿಶ್ವನಾಥ್ ಗಾಣಿಗ ದಾಖಲೆ

2016ರಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಪದಕಗಳ ಬೇಟೆಯಾಡಿರುವ ವಿಶ್ವನಾಥ್ ಗಾಣಿಗ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಬರೋಬ್ಬರಿ 22 ಚಿನ್ನದ ಪದಕ, 5 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕಗಳನ್ನ ಗೆದ್ದಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ 6 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕಗಳನ್ನ ತನ್ನದಾಗಿಸಿಕೊಂಡಿದ್ದಾರೆ. 2018ರಲ್ಲಿ 83 ಕೆಜಿ ಸೀನಿಯರ್ ವಿಭಾಗದಲ್ಲಿ ವಿಫಲರಾಗಿದ್ದ, ಗಾಣಿಗ ಆನಂತರ ತಿರುಗಿ ನೋಡಿದ್ದೇ ಇಲ್ಲ. ತುಂಬಾ ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಒಂದೊಂದೇ ದಾಖಲೆಯನ್ನ ಮುರಿದರು.

ಸೆಪ್ಟೆಂಬರ್ 2019 ರಲ್ಲಿ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 93 ಕೆಜಿ ವಿಭಾಗದಲ್ಲಿ 8 ವರ್ಷಗಳ ಹಳೆಯ ದಾಖಲೆಯನ್ನು (315 ಕೆಜಿ) ಮುರಿದರು. ಜೊತೆಗೆ ಭಾರತಕ್ಕಾಗಿ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಡೆಡ್‌ಲಿಫ್ಟ್ 327.5 ಕೆಜಿ ದಾಖಲೆಯನ್ನು ಮಾಡಿದರು.

2016ರ ಸ್ಟ್ರಾಂಗ್‌ ಮ್ಯಾನ್ ಆಫ್ ಇಂಡಿಯಾ

2016ರ ಸ್ಟ್ರಾಂಗ್‌ ಮ್ಯಾನ್ ಆಫ್ ಇಂಡಿಯಾ

2016ನೇ ಇಸವಿಯಲ್ಲಿ 80 ಕೆಜಿ ವಿಭಾಗದಲ್ಲಿ ಭಾರತದ ಜೆರಾಯ್ ಸ್ಟ್ರಾಂಗ್‌ಮ್ಯಾನ್ ಆಫ್ ಇಂಡಿಯಾ-2017 ಪ್ರಶಸ್ತಿ ವಿಜೇತರಾಗಿರುವ ವಿಶ್ವನಾಥ್‌ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೂನಿಯರ್ ಲೆವೆಲ್ ರೆಕಾರ್ಡ್ ಕೂಡ ಹೊಂದಿದ್ದಾರೆ. ಇದರ ಜೊತೆಗೆ ಕಾಮನ್‌ವೆಲ್ತ್ ಡೆಡ್‌ಲಿಫ್ಟ್ ರೆಕಾರ್ಡ್ ಹೋಲ್ಡರ್ ಕೂಡ ಆಗಿದ್ದಾರೆ. 93 ಕೆಜಿಯಲ್ಲಿ 327.5 ಕೆಜಿ ಡೆಡ್‌ಲಿಫ್ಟ್ ಮಾಡಿದ್ದಾರೆ.

ವಿಶ್ವನಾಥ್ ಗಾಣಿಗ ಸಾಧನೆಗಳು

ವಿಶ್ವನಾಥ್ ಗಾಣಿಗ ಸಾಧನೆಗಳು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2019
ಗಾಣಿಗ ರತ್ನ ರಾಜ್ಯ ಪ್ರಶಸ್ತಿ 2018
ವಿದ್ಯಜ್ಯೋತಿ ಪ್ರಶಸ್ತಿ 2021
ಯುವ ರತ್ನ ಪ್ರಶಸ್ತಿ 2022

2018ರಲ್ಲಿ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವಿಶ್ವನಾಥ್

2018ರಲ್ಲಿ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವಿಶ್ವನಾಥ್

ತನ್ನ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಿದ್ದ ವಿಶ್ವನಾಥ್‌ಗೆ 2018ರಲ್ಲಿ ನಡೆದ ಅಪಘಾತವು ಬರಸಿಡಿಲಿನಂತೆ ಬಡಿಯಿತು. ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆರು ದಿನಗಳ ಕಾಲ ಕೋಮಾದಲ್ಲಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಆನಂತರ ವೈದ್ಯರು ಮೂರು ಕೆಜಿ ಭಾರವನ್ನು ಸಹ ಎತ್ತಬಾರದು ಎಂದು ಸಲಹೆ ನೀಡಿದರು. ಆದ್ರೆ ಅದ್ಯಾವುದಕ್ಕೂ ಲೆಕ್ಕ ಇಡದ ವಿಶ್ವನಾಥ್ ಬರೋಬ್ಬರಿ 327 ಕೆಜಿ ತೂಕ ಎತ್ತುವ ಮೂಲಕ ತನ್ನ ಅಮೋಘ ಸಾಮರ್ಥ್ಯ ಪ್ರದರ್ಶಿಸಿದರು.

ಪ್ರಸ್ತುತ ಜಿಮ್ ನಡೆಸುವ ಮೂಲಕ ತರಬೇತಿ ನೀಡುತ್ತಿರುವ ವಿಶ್ವನಾಥ್

ಪ್ರಸ್ತುತ ಜಿಮ್ ನಡೆಸುವ ಮೂಲಕ ತರಬೇತಿ ನೀಡುತ್ತಿರುವ ವಿಶ್ವನಾಥ್

ಬೆಂಗಳೂರಿನ ಜಯನಗರದ ಸೌತ್ ಅಂಡ್ ಸರ್ಕಲ್ ಮೆಟ್ರೋ ಸ್ಟೇಷನ್‌ ಕೆಳಗಿರುವ ''ಬಾಲರ್ಕ ಫಿಟ್ನೆಸ್ ಸೆಂಟರ್'' ಎಂಬ ಹೆಸರಿನ ಜಿಮ್ ನಡೆಸುತ್ತಿರುವ ವಿಶ್ವನಾಥ್ ಭಾಸ್ಕರ್ ಗಾಣಿಗ, ಅನೇಕರಿಗೆ ಫಿಟ್ನೆಸ್ ತರಬೇತಿ ನೀಡುವ ಮೂಲಕ ಕಾರ್ಯ ಪ್ರವೃತ್ತರಾಗಿದ್ದಾರೆ.

2020ರಲ್ಲಿ ''ಬಾಲರ್ಕ ಫಿಟ್ನೆಸ್ ಸೆಂಟರ್'' ಪ್ರಾರಂಭಿಸಿದ ಈ ಅಂತರಾಷ್ಟ್ರೀಯ ಪವರ್ ಲಿಫ್ಟರ್, ಆಸಕ್ತರಿಗೆ ಪವರ್ ಲಿಫ್ಟಿಂಗ್ ಟ್ರೈನಿಂಗ್, ಸ್ಟ್ರೆಂಥ್ ಟ್ರೈನಿಂಗ್, ಫ್ಯಾಟ್ ಲಾಸ್ ವರ್ಕೌಟ್‌ಗಳನ್ನ ಹೇಳಿಕೊಡುತ್ತಾರೆ. ಪವರ್‌ಲಿಫ್ಟಿಂಗ್‌ನಲ್ಲಿ ಅಪಾರ ಅನುಭವ ಹೊಂದಿರುವ ವಿಶ್ವನಾಥ್ ಗಾಣಿಗ ಮತ್ತಷ್ಟು ಯುವ ಪವರ್ ಲಿಫ್ಟಿಂಗ್‌ ಪ್ರತಿಭೆಗಳಿಗೆ ದಾರಿ ದೀಪವಾಗಲಿ ಎಂಬುದು ''ಮೈಖೇಲ್‌ ಕನ್ನಡ''ದ ಆಶಯ.

Story first published: Friday, May 6, 2022, 11:34 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X