
ಮುಂಬೈ, ಮೇ 6: ಈ ಬಾರಿಯ ಐಪಿಎಲ್‌ನಲ್ಲಿ ಆ್ಯಂಡ್ರೆ ರಸೆಲ್ ತೀರಾ ವೈಫಲ್ಯ ತೋರಿಕೊಂಡಿದ್ದಿಲ್ಲ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡವಿನ ಪಂದ್ಯದಲ್ಲಿ ರಸೆಲ್ ತೀರಾ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾದರು. ಪರಿಣಾಮ ಕೆಕೆಆರ್ 9 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು ಕೂಡ.
ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮೇ 5) ನಡೆದ ಐಪಿಎಲ್ ಕಡೆಯ ಲೀಗ್ ಪಂದ್ಯದಲ್ಲಿ ಕೆಕೆಆರ್ ಆಲ್ ರೌಂಡರ್ ರಸೆಲ್ ನಿರಾಶೆ ಅನುಭವಿಸಿದ್ದರು. ಬ್ಯಾಟಿಂಗ್ ವೇಳೆ 0 ರನ್‌ಗೆ ವಿಕೆಟ್ ಒಪ್ಪಿಸಿದ್ದ ರಸೆಲ್, ಬೌಲಿಂಗ್ ವೇಳೆ ಕೇವಲ 2.1 ಓವರ್‌ಗೆ ವಿಕೆಟ್ ಪಡೆಯದೆ 34 ರನ್ ನೀಡಿದ್ದರು.
ಮುಂಬೈ ಇನ್ನಿಂಗ್ಸ್ ವೇಳೆ 4ನೇ ಓವರ್ ಎಸೆಯೋಕೆ ರಸೆಲ್ ಬಂದಿದ್ದರು. ಆ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಕ್ರೀಸ್‌ನಲ್ಲಿದ್ದರು. ರಸೆಲ್ ಹೆಚ್ಚಿನ ಎಸೆತಗಳನ್ನು ಡಿ ಕಾಕ್ ಬೌಂಡರಿಗೆ ಅಟ್ಟಿದ್ದರು. ಈ ವೇಳೆ ರಸೆಲ್ ಮುಖದಲ್ಲಿ ಸಿಡುಕಿನ ಛಾಯೆಯಿತ್ತು. ಕ್ರೀಸ್ ಮಧ್ಯೆ ಇಬ್ಬರೂ ಡಿಚ್ಚಿ ಹೆಡೆದಿದ್ದೂ ವಿಡಿಯೋದಲ್ಲಿ ಸೆರೆಯಾಗಿತ್ತು.
ಪಂದ್ಯದ ಈ ಬಿಗುವಿನ ಕ್ಷಣದ ಬಗ್ಗೆ ಮುಂಬೈ ಯುವ ಆಟಗಾರ ಇಶಾನ್ ಕಿಶಾನ್ ಜೊತೆ ಮಾತನಾಡುತ್ತ ಡಿ ಕಾಕ್, 'ನಾನು ಅವನ (ರಸೆಲ್) ಎಸೆತಗಳಿಗೆ ದೊಡ್ಡ ಹೊಡೆತಗಳನ್ನು ಕೊಟ್ಟಿದ್ದಕ್ಕೆ ಆತ ಮುನಿಸಿಕೊಂಡಿದ್ದ' ಎಂದು ಹೀಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದೆ. ಅಂತೂ ಈ ಪಂದ್ಯದೊಂದಿಗೆ ಕೆಕೆಆರ್ ಪ್ಲೇ ಆಫ್ ಕನಸು ಮುರಿದುಬಿದ್ದಿದ್ದಂತೂ ನಿಜ.