
ನಾಯಕ, ಕೋಚ್ ಭೇಟಿಯಾಗಲಿರುವ ಬಿಸಿಸಿಐ ಪದಾಧಿಕಾರಿಗಳು
ಹೀಗಾಗಿ ಟೆಸ್ಟ್ ಸರಣಿಯ ನಂತರ ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ ತಕ್ಷಣವೇ, ಬಿಸಿಸಿಐನ ಉನ್ನತ ಮಟ್ಟದ ಪದಾಧಿಕಾರಿಗಳು ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿ ಪರಾಮರ್ಶೆ ನಡೆಸಲಿದ್ದಾರೆ.
ಬುಧವಾರ (ಡಿಸೆಂಬರ್ 7) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಐದು ರನ್‌ಗಳ ಸೋಲುವ ಮೂಲಕ ಟೀಮ್ ಇಂಡಿಯಾ 2015ರ ನಂತರ ಮತ್ತೊಮ್ಮೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು ಸೋತಿದೆ. 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಭಾರತ ತಂಡ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ.

ಬಾಂಗ್ಲಾದೇಶದಿಂದ ಹಿಂತಿರುಗಿದ ತಕ್ಷಣ ಪರಾಮರ್ಶೆ ಸಭೆ
"ಕೆಲವು ಪದಾಧಿಕಾರಿಗಳು ಕಾರ್ಯನಿರತರಾಗಿದ್ದರಿಂದ ಬಾಂಗ್ಲಾದೇಶಕ್ಕೆ ಹೋಗುವ ಮೊದಲು ನಾವು ಭಾರತ ತಂಡವನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಬಾಂಗ್ಲಾದೇಶದಿಂದ ಹಿಂತಿರುಗಿದ ತಕ್ಷಣ ನಾವು ಸಭೆಯನ್ನು ನಿಗದಿಪಡಿಸುತ್ತೇವೆ. ಬಾಂಗ್ಲಾದೇಶದ ವಿರುದ್ಧ ಮುಜುಗರದ ಪ್ರದರ್ಶನವಾಗಿದೆ ಮತ್ತು ಭಾರತ ತಂಡ ಈ ರೀತಿ ಸೋಲುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ," ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ತಂಡದ ಪರಾಮರ್ಶೆ ಸಭೆಯ ನಂತರ ಗುಜರಾತ್ ಟೈಟನ್ಸ್ ಮತ್ತು ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ನಾಯಕತ್ವ ನೀಡುವ ಸಾಧ್ಯತೆ ಇದ್ದು, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನೊಂದಿಗೆ ರೋಹಿತ್ ಶರ್ಮಾ ಅವರ ಏಕದಿನ ನಾಯಕತ್ವವನ್ನು ಎಷ್ಟು ದಿನ ಮುಂದುವರೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

2024ರ ಟಿ20 ವಿಶ್ವಕಪ್ ವೇಳೆಗೆ ಹಾರ್ದಿಕ್ ಪಾಂಡ್ಯ ನಾಯಕ
ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾಗೆ ಈಗಾಗಲೇ 35 ವರ್ಷ ವಯಸ್ಸಾಗಿದೆ. ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ವರೆಗೂ ಅವರನ್ನು ನಾಯಕರನ್ನಾಗಿ ಉಳಿಸಿಕೊಳ್ಳಲು ಬಿಸಿಸಿಐ ಬಯಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ವೇಳೆಗೆ ಹಾರ್ದಿಕ್ ಪಾಂಡ್ಯ ನಾಯಕರಾಗುವ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಚೇತನ್ ಶರ್ಮಾ, ಸುನಿಲ್ ಜೋಶಿ, ದೇಬಾಶಿಶ್ ಮೊಹಂತಿ ಮತ್ತು ಹರ್ವಿಂದರ್ ಸಿಂಗ್ ಅವರ ಅಧಿಕಾರಾವಧಿಯನ್ನು ಮುಂದುವರೆಸದಿರುವ ನಿರ್ಧಾರ ಕೈಗೊಳ್ಳಲಾಯಿತು. ಈವರೆಗೂ ಬಿಸಿಸಿಐ ಹೊಸ ಆಯ್ಕೆ ಸಮಿತಿಯನ್ನು ನೇಮಿಸಿಲ್ಲ, ಆದರೆ ಈ ಉದ್ದೇಶಕ್ಕಾಗಿ ಕ್ರಿಕೆಟ್ ಸಲಹಾ ಸಮಿತಿಯನ್ನು ನೇಮಿಸಿದೆ.