ಮೊದಲ ಪಂದ್ಯದಲ್ಲೇ ಮೆಚ್ಚುಗೆ ಗಳಿಸಿದ ಮಾರ್ಖಂಡೆ

Posted By:
IPL 2018: Debutant Markande impresses Mumbai coach Jayawardene

ಮುಂಬೈ, ಏಪ್ರಿಲ್ 8: ನಿನ್ನೆ (ಏ. 7) ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್ ಸೋತರೂ, ಪದಾರ್ಪಣೆಯ ಪಂದ್ಯದಲ್ಲಿಯೇ ಲೆಗ್ ಸ್ಪಿನ್ನರ್ ಮಯಂಕ್ ಮಾರ್ಖಂಡೆ, ಎಲ್ಲರ ಮನಗೆದ್ದಿದ್ದಾರೆ.

ಸಿಎಸ್‌ಕೆಯ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಹತ್ವದ ವಿಕೆಟ್ ಸೇರಿದಂತೆ, ನಾಲ್ಕು ಓವರ್‌ನಲ್ಲಿ 23 ರನ್ ನೀಡಿ 3 ವಿಕೆಟ್ ಕಬಳಿಸಿದ ಮಾರ್ಖಂಡೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಾರ್ಖಂಡೆ ಅವರ ಗೂಗ್ಲಿಗೆ ನಾಯಕ ಧೋನಿ ಎಲ್‌ಬಿಡಬ್ಲ್ಯೂ ಆಗಿದ್ದರು. ಮಾರ್ಖಂಡೆ ಚುರುಕಿನ ದಾಳಿ ನಡೆಸಿ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮುನ್ನಡೆ ತಂದಿದ್ದರೂ, ಬಳಿಕ ಸಿಎಸ್‌ಕೆಯ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ಸೋಲು ಅನುಭವಿಸಬೇಕಾಯಿತು.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಸಿಎಸ್‌ಕೆ ವೇಳಾಪಟ್ಟಿ

ಪಂಜಾಬ್‌ನ ಬತಿಂಡದವರಾದ 20 ವರ್ಷದ ಮಾರ್ಖಂಡೆಯನ್ನು ಮುಂಬೈ ಇಂಡಿಯನ್ಸ್ ಕೋಚ್ ಮಾಹೇಲ ಜಯವರ್ಧನೆ ಶ್ಲಾಘಿಸಿದ್ದಾರೆ. ಮೊದಲ ಪಂದ್ಯದಲ್ಲಿಯೇ ಮಾರ್ಖಂಡೆ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟೂರ್ನಿ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಮಾರ್ಖಂಡೆ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಚುರುಕಿನ ಬೌಲಿಂಗ್ ಶೈಲಿ ಗಮನಿಸಿ ಮುಂಬೈ ಇಂಡಿಯನ್ಸ್ ಅವರನ್ನು ಖರೀದಿಸಿತ್ತು.

ಮಾರ್ಖಂಡೆ ಕುರಿತು ಟ್ವೀಟ್

ಮಾರ್ಖಂಡೆ ಯಾರು ಎಂಬುದೇ ತಿಳಿದಿಲ್ಲವೇ? ಅವರು ಪಾಟಿಯಾಲಾದ 20 ವರ್ಷದ ಲೆಗ್ ಸ್ಪಿನ್ನರ್. ಧೋನಿಯ ಮಹತ್ವದ ವಿಕೆಟ್‌ಅನ್ನು ಪಡೆದವರು. ಮುಂದೆ ಅವರ ಬಗ್ಗೆ ಮತ್ತಷ್ಟು ಕೇಳಲಿದ್ದೇವೆ ಎಂದು ಪತ್ರಕರ್ತ ಆಯಾಜ್ ಮೆಮೊನ್ ಟ್ವೀಟ್ ಮಾಡಿದ್ದಾರೆ.

'ತಂಡದ ಶಿಬಿರದಲ್ಲಿ ಮಾರ್ಖಂಡೆ ಅವರನ್ನು ಮೊದಲ ಬಾರಿ ನೋಡಿದಾಗ ಗಮನ ಸೆಳೆದಿದ್ದರು. ಅವರು ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅವರು ವಿಶೇಷ ಎಂಬುದು ನಮಗೆ ತಿಳಿದಿತ್ತು. ಮಾರ್ಖಂಡೆ ಮತ್ತು ಚಾಹರ್ ಇಬ್ಬರೂ ಅಭ್ಯಾಸ ಪಂದ್ಯದಲ್ಲಿ ಆಡಲು ಬಂದಿದ್ದರು' ಎಂದು ಜಯವರ್ಧನೆ ಹೇಳಿದ್ದಾರೆ.

'ಯುವ ಆಟಗಾರರನ್ನು ನಾವು ಪ್ರೋತ್ಸಾಹಿಸಿದೆವು. ಈ ವರ್ಷ ನಾವು ಅದನ್ನು ಮಾಡಬೇಕಿತ್ತು. ಅವರು ಚೆನ್ನಾಗಿ ಬೌಲಿಂಗ್ ಮಾಡಿದರು. ನನಗೆ ಖುಷಿ ನೀಡಿದೆ' ಎಂದು ಹೊಗಳಿದ್ದಾರೆ.

ಮಾರ್ಖಂಡೆ ಅವರ ಬೌಲಿಂಗ್‌ನಲ್ಲಿನ ನಿಖರತೆಯನ್ನು ಜಯವರ್ಧನೆ ಪ್ರಶಂಸಿಸಿದ್ದಾರೆ. ಅವರಲ್ಲಿ ನಿಖರತೆಯಿದೆ ಮತ್ತು ಮಾಮೂಲಿ ಲೆಗ್ ಸ್ಪಿನ್ನರ್‌ಗಳಿಗಿಂತ ತುಸು ವಿಭಿನ್ನತೆ ಇದೆ. ಅವರು ಚೆಂಡನ್ನು ಎಸೆಯುವ ರೀತಿ, ಅವರು ಪ್ರತಿ ಎಸೆತವೂ ವೈವಿಧ್ಯವಾಗಿರುವಂತೆ ಚೆಂಡಿನ ಮೇಲೆ ಹೊಂದಿರುವ ನಿಯಂತ್ರಣ ಗಮನಾರ್ಹ.

ಹೆಚ್ಚು ಟಿ 20 ಪಂದ್ಯಗಳನ್ನು ಆಡಿರದಿದ್ದರೂ ಮಾರ್ಖಂಡೆ ಅತೀವ ಆತ್ಮವಿಶ್ವಾಸ ಹೊಂದಿರುವ ಆಟಗಾರ. ಅಂತಹ ಆಟಗಾರರಿಗೆ ನಾವು ಬೆಂಬಲ ನೀಡಲು ಬಯಸುತ್ತೇವೆ. ಒಂದು ಅವಕಾಶ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಇದೇ ನಿದರ್ಶನ ಎಂದು ಜಯವರ್ಧನೆ ಹೇಳಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 14:15 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ