ಐಪಿಎಲ್ ಮಿನಿ ಹರಾಜಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಮುಕ್ತಾಯವಾಗಿದೆ. ಹರಾಜಿಗಾಗಿ 714 ಭಾರತೀಯರು ಮತ್ತು 277 ವಿದೇಶಿ ಆಟಗಾರರು ಸೇರಿ 991 ಆಟಗಾರರು ನೋಂದಾಯಿಸಿಕೊಂಡಿದ್ದಾರೆ.
ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಜೋ ರೂಟ್ ಮತ್ತು ಮಯಾಂಕ್ ಅಗರ್ವಾಲ್‌ರಂತಹ ಆಟಗಾರರು ಈ ಬಾರಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಗರಿಷ್ಠ 87 ಆಟಗಾರರು ಮಾತ್ರ ಮಾರಾಟವಾಗಲಿದ್ದಾರೆ.
ನವೆಂಬರ್ 30ರಂದು ಆಟಗಾರರು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿತ್ತು. 23ನೇ ಡಿಸೆಂಬರ್ 2022 ರಂದು ಕೊಚ್ಚಿಯಲ್ಲಿ ನಡೆಯಲಿರುವ ಟಾಟಾ ಐಪಿಎಲ್ 2023 ಆಟಗಾರರ ಹರಾಜಿನ ಭಾಗವಾಗಲು ಸಹಿ ಹಾಕಿದ್ದಾರೆ.
185 ಕ್ಯಾಪ್ಡ್, 786 ಅನ್‌ಕ್ಯಾಪ್ಡ್ ಮತ್ತು 20 ಅಸೋಸಿಯೇಟ್ ನೇಷನ್ಸ್ ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಫ್ಘಾನಿಸ್ತಾನ 14, ಆಸ್ಟ್ರೇಲಿಯಾ 57, ಬಾಂಗ್ಲಾದೇಶ್ 6, ಇಂಗ್ಲೆಂಡ್ 31, ಐರ್ಲೆಂಡ್ 8, ನಮೀಬಿಯಾ 5, ನೆದರ್ಲ್ಯಾಂಡ್ಸ್ 7, ನ್ಯೂಜಿಲೆಂಡ್ 27, ಸ್ಕಾಟ್ಲೆಂಡ್ 2, ದಕ್ಷಿಣ ಆಫ್ರಿಕಾ 52, ಶ್ರೀಲಂಕಾ 23, ಯುಎಇ 6, ವೆಸ್ಟ್ ಇಂಡೀಸ್ 33, ಜಿಂಬಾಬ್ವೆ 6 ಆಟಗಾರರು ವಿದೇಶದಿಂದ ನೊಂದಾಯಿಸಿಕೊಂಡಿದ್ದಾರೆ.
ಅದೃಷ್ಠ ಪರೀಕ್ಷೆಗೆ ಇಳಿದ ಆಟಗಾರರು
2022ರ ಐಪಿಎಲ್ ಆವೃತ್ತಿಗೆ ಮುನ್ನ ಮೆಗಾ ಹರಾಜು ನಡೆದ ಕಾರಣ ಬಹುತೇಕ ಪ್ರಮುಖ ಆಟಗಾರರು ಈಗಾಗಲೇ ತಂಡಗಳನ್ನು ಸೇರಿಕೊಂಡಿದ್ದಾರೆ. ಆದರೆ, ಈ ಬಾರಿ ಕೆಲವು ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿರುವುದರಿಂದ ಕೆಲ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಇಂಗ್ಲೆಂಡ್‌ನ ವೇಗದ ಬೌಲರ್ ಸ್ಯಾಮ್ ಕರನ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಸೇರಿದಂತೆ ಹಲವು ಆಟಗಾರರು ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರ್ಸ್‌ನಲ್ಲಿ ಹೆಚ್ಚಿನ ಮೊತ್ತವಿದ್ದು, ದೊಡ್ಡ ಆಟಗಾರರನ್ನು ಖರೀದಿಸಲು ಈ ತಂಡಗಳು ಪ್ರಯತ್ನಿಸಲಿವೆ. ಈ ಬಾರಿ ಇಂಗ್ಲೆಂಡ್‌ನ ಜೋ ರೂಟ್ ಕೂಡ ಐಪಿಎಲ್‌ನಲ್ಲಿ ಆಡುವ ಆಸಕ್ತಿ ಹೊಂದಿದ್ದು, ಹೆಸರು ನೊಂದಾಯಿಸಿಕೊಂಡಿದ್ದಾರೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಯಲ್ಲೇ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತೀಯ ಯುವ ಕ್ರಿಕೆಟಿಗರಿಗೂ ಅದೃಷ್ಠ ಖುಲಾಯಿಸುವ ಸಾಧ್ಯತೆ ಇದೆ.