
ಪ್ರೊ ಕಬಡ್ಡ ಲೀಗ್‌ನ ಎರಡನೇ ದಿನದ ಮೊದಲ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ತಂಡ ಹಾಗೂ ಗುಜರಾತ್ ಜೈಂಟ್ಸ್ ತಂಡ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿದೆ. ರೋಚಕವಾಗಿ ನಡದ ಈ ಸೆಣೆಸಾಟದಲ್ಲಿ 34-27 ಅಂತರದಿಂದ ಗುಜರಾತ್ ಜೈಂಟ್ಸ್ ಗೆಲುವು ಸಾಧಿಸಿದೆ.
ಈ ಸೆಣೆಸಾಟದಲ್ಲಿ ಗುಜರಾತ್ ತಂಡದ ರಕ್ಷಣಾ ವಿಭಾಗದ ಪ್ರದರ್ಶನ ತಂಡ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಗುಜರಾತ್ ತಂಡ ರೈಡ್ ಮೂಲಕ 16 ಅಂಕಗಳನ್ನು ಗಳಿಸಿತಾದರೂ ಟ್ಯಾಕಲ್‌ನಲ್ಲಿ ಕೇವಲ 7 ಅಂಕಗಳನ್ನು ಮಾತ್ರ ಗಳಿಸಿತು. ಆದರೆ ಗುಜರಾತ್ ತಂಡ ರೈಡ್ ಮೂಲಕ 14 ಅಂಕಗಳನ್ನು ಗಳಿಸಿದ್ದರೆ ಟ್ಯಾಕಲ್ ಮೂಲಕ 13 ಅಂಗಳನ್ನು ಸೇರ್ಪಡೆಗೊಳಿಸಿತ್ತು. ಈ ಮೂಲಕ ಪಂದ್ಯದಲ್ಲಿ ಸಂಪೂರ್ಣ ಮೇಲುಗೂ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಗಿರೀಶ್ ಎರ್ನಾಕ್ ಒಬ್ಬರೇ ಟ್ಯಾಕಲ್‌ನಲ್ಲಿ 7 ಅಂಕಗಳನ್ನು ತಂಡಕ್ಕೆ ನೀಡಿದ್ದಾರೆ. ಇನ್ನು ರೈಡಿಂಗ್‌ನಲ್ಲಿ ರಾಕೇಶ್ ನರ್ವಾಲ್ 6 ಅಂಕ ಹಾಗೂ ರಾಕೇಶ್ ಸುಂಗ್ರೋಯಾ 5 ಅಂಕಗಳನ್ನು ಗಳಿಸಿದರು. ಈ ಮೂಲಕ ಗುಜರಾತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಪಿಂಕ್ ಪ್ಯಾಂಥರ್ಸ್ ತಂಡದ ಪರವಾಗಿ ಅರ್ಜುನ್ ದೇಶ್ವಾಲ್ 10 ಅಂಕಗಳನ್ನು ಗಳಿಸಿದರೆ ದೀಪಕ್ ಹೂಡಾ ನಾಲ್ಕು ಸಂದೀಪ್ ಧುಲ್ 3 ಅಂಕಗಳನ್ನು ಸಂಪಾದಿಸಿದರು.
ಇನ್ನು ಗುರುವಾರದ ಎರಡನೇ ಸೆಣೆಸಾಟದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪುಣೆರಿ ಪಲ್ತಾನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಪಲ್ತಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 41-30 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡ ಎದುರಾಳಿಗೆ ಸೋಲುಣಿಸಿದೆ.
ಈ ಸೆಣೆಸಾಟದಲ್ಲಿ ಎರಡು ತಂಡಗಳ ರೈಡರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಡೆಲ್ಲಿ ತಂಡದ ನವೀನ್ ಕುಮಾರ್ 14 ರೈಡ್ ಅಂಕಗಳೊಂದಿಗೆ ಒಟ್ಟು 16 ಅಂಕಗಳನ್ನು ಗಳಿಸಿ ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಇನ್ನು ವಿಜಯ್ ಮಲಿಕ್ ಒಟ್ಟು 9 ಅಂಕಗಳನ್ನು ತಂಡಕ್ಕೆ ನೀಡಿದರು. ಪುಣೆರಿ ಪಲ್ತಾನ್ ತಮಡದ ಪರವಾಗಿ ನಿತಿನ್ ತೋಮರ್ 7, ರಾಹುಲ್ ಚೌಧರಿ 5 ಹಾಗೂ ಪಂಕಜ್ ಮೋಹಿತ್ 5 ಅಂಕಗಳನ್ನು ಗಳಿಸಿದರಾದರೂ ಡೆಲ್ಲಿ ವಿರುದ್ಧ ಗೆಲುವಿಗೆ ಈ ಹೋರಾಟ ಸಾಕಾಗಲಿಲ್ಲ.