ಪ್ರೇರಣೆ ನೀಡುವ ಪಾಕ್ ವಿರುದ್ಧದ ಪಂದ್ಯ:ಶ್ರೀನಾಥ್

ದುಬೈ, ಜ. 22 : ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಯಾವಾಗಲೂ ಹೈ ವೋಲ್ಟೇಜ್ ನಿಂದ ಕೂಡಿರುತ್ತದೆ. ಪ್ರತಿಯೊಬ್ಬ ಆಟಗಾರರಿಗೂ ಪಾಕಿಸ್ತಾನ ವಿರುದ್ಧದ ಪಂದ್ಯ ಎಂದರೆ ಒಂದು ರೀತಿಯ ಪ್ರೇರಣೆ ಸಿಗುತ್ತದೆ. ಅದರಲ್ಲೂ ವಿಶ್ವಕಪ್ ಪಂದ್ಯ ಎಂದರೆ ಕತೆ ಮುಗಿದೇ ಹೋಯಿತು.

ಹೀಗೆ ತಮ್ಮ ಅನುಭವಗಳನ್ನು ತೆರೆದಿಟ್ಟವರು ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್. ಸದ್ಯ ಐಸಿಸಿ ರೆಫ್ರಿಯಾಗಿರುವ ಜಾವಗಲ್ ಶ್ರೀನಾಥ್ ಐಸಿಸಿ ವೆಬ್ ಸೈಟ್ ಗೆ ಬರೆದ ಅಂಕಣವೊಂದರಲ್ಲಿ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

cricket

ಪಾಕಿಸ್ತಾನದ ವಿರುದ್ಧ ವಿಶ್ವಕಪ್ ನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು ಮರೆಯಲಾಗದ ಕ್ಷಣ. ಅದರ ಅನಿಭವವೇ ಬೇರೆ. ಒಂದೇ ಪಂದ್ಯ ಗೆದ್ದರೂ ವಿಶ್ವ ಜಯಿಸಿದ ಸಂತಸ ಸಿಗುತ್ತದೆ ಎಂದು ಶ್ರೀನಾಥ್ ಹೇಳಿದ್ದಾರೆ.

ಪಂದ್ಯಾವಳಿಯ ಅಂತಿಮ ಪಂದ್ಯವೇನೋ ಎಂಬಂತೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಬಿಂಬಿತವಾಗುತ್ತದೆ. ಎರಡು ತಂಡದ ಅಭಿಮಾನಿಗಳು ತಮ್ಮೆಲ್ಲ ಕೆಲಸ ಬಿಟ್ಟು ಪಂದ್ಯ ವೀಕ್ಷಿಸುತ್ತಾರೆ. ಆ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲದಿದ್ದರೂ ಜನರಲ್ಲಿ ಮತ್ತು ಆಟಗಾರರಲ್ಲಿ ಕೆಚ್ಚು ಮಾತ್ರ ಮಾಯವಾಗಿರಲ್ಲ ಎಂದು ವಿಶ್ವಕಪ್ ನಲ್ಲಿ ಭಾರತದ ಪರ ಒಟ್ಟು 44 ವಿಕೆಟ್ ಕಬಳಿಸಿದ ಶ್ರೀನಾಥ್ ಉಲ್ಲೇಖ ಮಾಡಿದ್ದಾರೆ.

1992ರ ಮಿಯಾಂದಾದ್-ಕೀರಣ್ ಮೋರೆ ಘಟನೆ, 1996ರ ವೆಂಕಟೇಶ ಪ್ರಸಾದ್-ಅಮೀರ್ ಸೊಹೈಲ್ ಪ್ರಕರಣ ಮತ್ತು 2003 ರ ಸಚಿನ್ ತೆಂಡೂಲ್ಕರ್ ಮತ್ತು ಶೊಯೆಬ್ ಅಕ್ತರ್ ನಡುವಿನ ಸಂಘರ್ಷಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಹೈ ವೋಲ್ಟೇಜ್ ಗೆ ಸಾಕ್ಷಿ ಎಂದು ಶ್ರೀನಾಥ್ ಹೇಳಿದ್ದಾರೆ.

ಇಡೀ ಪ್ರಪಂಚವೇ ಫೆಬ್ರವರಿ 15 ರ ಭಾರತ-ಪಾಕಿಸ್ತಾನ ಪಂದ್ಯದ ನಿರೀಕ್ಷೆಯಲ್ಲಿದೆ. ನಾನು ಸಹ ಮತ್ತೊಂದು ಹೋರಾಟವನ್ನು ನಿರೀಕ್ಷಿಸುತ್ತಿದ್ದೇನೆ. ಎರಡೂ ತಂಡಗಳ ಬಲ ಸಮನಾಗಿದ್ದು ಆಟಗಾರರ ಅಂದಿನ ಮನಸ್ಥಿತಿಯೇ ಪಂದ್ಯದ ಫಲಿತಾಂಶಕ್ಕೆ ಕಾರಣವಾಗಬಲ್ಲದು ಎಂದು ಶ್ರೀನಾಥ್ ಹೇಳಿದ್ದಾರೆ.

Story first published: Thursday, January 22, 2015, 19:03 [IST]
Other articles published on Jan 22, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ