
ಬೆಂಗಳೂರು, ನವೆಂಬರ್ 14: ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಪ್ರಜ್ಞೇಶ್, ಸೆಬಾಸ್ಟಿಯನ್ ಫ್ಯಾನ್ಸೆಲೊ ಸೋಲಿಸಿ ಮುನ್ನಡೆ ಸಾಧಿಸಿದರು.
ಬುಧವಾರ (ನವೆಂಬರ್ 14) ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಗುಣೇಶ್ವರನ್ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಸೆಟ್ ಸೋತರೂ ಕೂಡ ಅಂತಿಮವಾಗಿ 4-6, 6-4, 7-5ರ ಅಂತರದಿಂದ ಜರ್ಮನ್ ಆಟಗಾರ ಸೆಬಾಸ್ಟಿಯನ್ ಫ್ಯಾನ್ಸೆಲೊ ಅವರನ್ನು ಕೆಡವಿ ಮುನ್ನಡೆ ಗಿಟ್ಟಿಸಿಕೊಂಡರು.
ಇದಕ್ಕೂ ಮುನ್ನ ಮಂಗಳವಾರ (ನವೆಂಬರ್ 13) ನಡೆದ ಪಂದ್ಯದಲ್ಲಿ ವಿಶ್ವ ನಂ.144ನೇ ಆಟಗಾರ ಪ್ರಜ್ಞೇಶ್, ವಿಶ್ವ ನಂ. 263ನೇ ಆಟಗಾರ ರಷ್ಯಾದ ಇವಾನ್ ನೆಡೆಲ್ಕೊ ಅವರನ್ನು 6-2, 6-2ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು.
ಭಾರತದ ಮತ್ತೊಬ್ಬ ಆಟಗಾರ ಶಶಿಕುಮಾರ್ ಮುಕುಂದ್ ಕೂಡ ದ್ವಿತೀಯ ಸುತ್ತಿನ ಸ್ಪರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮುಕುಂದ್ ಅವರು ಅಮೆರಿಕಾ ಆಟಗಾರ ಕಾಲಿನ್ ಆಲ್ಟಮಿರಾನೋ ಅವರನ್ನು 7-6(6), 6-3ರ ಅಂತರದಿಂದ ಹಿಮ್ಮೆಟ್ಟಿಸಿದರು.
ಮತ್ತೊಂದು ಪಂದ್ಯದಲ್ಲಿ ಸಾಕೇತ್ ಮೈನೇನಿ ಅವರು ಭಾರತದವರೇ ಆದ 18ರ ಹರೆಯದ ಆದಿಲ್ ಕಲ್ಯಾಣ್‌ಪುರ್ ಅವರನ್ನು 6-3, 7-6(3) ಅಂತರದಿಂದ ಕೆಡವಿ ಮುನ್ನಡೆ ಸಾಧಿಸಿದರು. ಚಾಂಪಿಯನ್ ಸುಮಿತ್ ನಗಾಲ್ ಅವರೂ ಈಗಾಗಲೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.