
ನಾಕೌಟ್ ಹಂತ ತಲುಪಲು ವಿಫಲವಾಗಿದ್ದ ಸಿಎಸ್‌ಕೆ
2023ರ ಐಪಿಎಲ್ ಲೀಗ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಎಸ್ ಧೋನಿ ಬದಲಾಗಿ ಹೊಸ ನಾಯಕನನ್ನು ಹುಡುಕುವ ಅಗತ್ಯವಿದೆ. ಐಪಿಎಲ್ 2022ರಲ್ಲಿ ರವೀಂದ್ರ ಜಡೇಜಾ ಅವರನ್ನು ನಾಯಕನಾಗಿ ಪ್ರಯತ್ನಿಸಿದರೂ, ತಂಡದ ಉತ್ತಮ ಫಲಿತಾಂಶ ಪಡೆಯುವಲ್ಲಿ ಹಿಂದೆ ಬಿದ್ದತು. ಲೀಗ್ ಮಧ್ಯದಲ್ಲೇ ಪುನಃ ಎಂಎಸ್ ಧೋನಿಗೆ ನಾಯಕತ್ವ ನೀಡಲಾಯಿತಾದರೂ, ನಾಕೌಟ್ ಹಂತ ತಲುಪಲು ವಿಫಲವಾಯಿತು.
ಮುಂದಿನ ಐಪಿಎಲ್ ವೇಳೆಗೆ ಸಿಎಸ್‌ಕೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ಯಾರಿಗಾದರೂ ನಾಯಕನ ಪಟ್ಟ ಕಟ್ಟಬೇಕಿದೆ. ಇದೀಗ ಅಂತಹ ಒಬ್ಬ ಆಟಗಾರನನ್ನು ಕೋಚ್ ಮೈಕಲ್ ಹಸ್ಸಿ ಹೆಸರಿಸಿದ್ದಾರೆ. ಅವರೇ ರುತುರಾಜ್ ಗಾಯಕ್ವಾಡ್.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವ
ಸದ್ಯ ದೇಶೀಯ ಟೂರ್ನಿಯ ಸ್ಟಾರ್ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ತಮ್ಮ ಮಹಾರಾಷ್ಟ್ರ ತಂಡವನ್ನು ವಿಜಯ್ ಹಜಾರೆ ಟ್ರೋಫಿ 2022ರ ಫೈನಲ್‌ವರೆಗೂ ಮುನ್ನಡೆಸಿದರು. ಇದೇ ವೇಳೆ ಟೂರ್ನಿಯುದ್ದಕ್ಕೂ ಶತಕಗಳನ್ನು ಬಾರಿಸಿ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
ರುತುರಾಜ್ ಗಾಯಕ್ವಾಡ್ ಇನ್ನೂ ಯುವಕನಾಗಿದ್ದು, ಶಾಂತ ಮತ್ತು ಅತ್ಯುತ್ತಮ ಬ್ಯಾಟರ್ ಕೂಡ ಹೌದು. ಅವರು ಭಾರತೀಯ ಕ್ರಿಕೆಟ್‌ನ ಮುಂದಿನ ದೊಡ್ಡ ಸ್ಟಾರ್ ಆಗುವ ಲಕ್ಷಣ ಹೊಂದಿದ್ದಾರೆ ಮತ್ತು ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.
ಹೀಗಾಗಿ ಮಾಜಿ ಸಿಎಸ್‌ಕೆ ಬ್ಯಾಟ್ಸ್‌ಮನ್ ಮತ್ತು ಹಾಲಿ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಮೈಕಲ್ ಹಸ್ಸಿ ಅವರು ಎಂಎಸ್ ಧೋನಿಯ ನಂತರ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ರುತುರಾಜ್ ಗಾಯಕ್ವಾಡ್ ಸೂಕ್ತ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್ ಧೋನಿಯಂತೆ ರುತುರಾಜ್ ತುಂಬಾ ಶಾಂತ ಸ್ವಭಾವ
"ಸಿಎಸ್‌ಕೆ ತಂಡದಲ್ಲಿ ಭವಿಷ್ಯದ ಯೋಜನೆಗಳೇನು ಎಂದು ನನಗೆ ಖಚಿತ ಮಾಹಿತಿ ಇಲ್ಲ. ಆದರೆ ಎಂಎಸ್ ಧೋನಿಯಂತೆ ರುತುರಾಜ್ ತುಂಬಾ ಶಾಂತ ಸ್ವಭಾವದವರಾಗಿದ್ದಾರೆ. ಧೋನಿಯಂತೆ ಒತ್ತಡವನ್ನು ನಿಭಾಯಿಸಲು ಕಲೆ ಆತನಿಗೆ ಗೊತ್ತಿದೆ ಮತ್ತು ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ," ಎಂದು ಮೈಕಲ್ ಹಸ್ಸಿ ತಿಳಿಸಿದ್ದಾರೆ.
"ರುತುರಾಜ್ ಗಾಯಕ್ವಾಡ್ ಸ್ವಭಾವ ಮತ್ತು ವ್ಯಕ್ತಿತ್ವದಿಂದಾಗಿ ಜನರು ಅವನತ್ತ ಆಕರ್ಷಿತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ರುತುರಾಜ್ ಕೆಲವು ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿರುವುದನ್ನು ದೇಶೀಯ ಕ್ರಿಕೆಟ್‌ನಲ್ಲಿ ಸಾಬೀತುಪಡಿಸಿದ್ದಾರೆ," ಎಂದು ಸಿಎಸ್‌ಕೆ ಕೋಚ್ ಮೈಕಲ್ ಹಸ್ಸಿ ಹೇಳಿದರು.

ಉತ್ತರ ಪ್ರದೇಶ ವಿರುದ್ಧ 159 ಎಸೆತಗಳಲ್ಲಿ 220 ರನ್
ರುತುರಾಜ್ ಗಾಯಕ್‌ವಾಡ್ ಅವರು ದೇಶೀಯ 50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ನಾಯಕತ್ವ ಜವಾಬ್ದಾರಿಯ ಜೊತೆಗೆ ಅತ್ಯುತ್ತಮ ಫಾರ್ಮ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಉತ್ತರ ಪ್ರದೇಶ ವಿರುದ್ಧ 159 ಎಸೆತಗಳಲ್ಲಿ 220 ರನ್ ಗಳಿಸಿದ್ದು, ಇದರಲ್ಲಿ ಸತತ 7 ಸಿಕ್ಸರ್‌ಗಳನ್ನು ಸಿಡಿಸಿದರು. ಸೆಮಿಫೈನಲ್‌ನಲ್ಲಿ ರುತುರಾಜ್ 126 ಎಸೆತಗಳಲ್ಲಿ 168 ರನ್ ಗಳಿಸಿದರು. ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 108 ರನ್ ಗಳಿಸುವುದರೊಂದಿಗೆ ಪಂದ್ಯಾವಳಿಯನ್ನು ಮತ್ತೊಂದು ಶತಕದೊಂದಿಗೆ ಮುಗಿಸಿದರು. ಆಡಿದ 5 ಪಂದ್ಯಗಳಲ್ಲಿ 660 ರನ್ ಗಳಿಸಿದ್ದು, ಇದರಲ್ಲಿ 4 ಶತಕ ಒಳಗೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.