
ದುಬೈ, ಫೆಬ್ರವರಿ 1: ದುಬೈಯ ಐಸಿಸಿ ಅಕಾಡೆಮಿ ಸ್ಟೇಡಿಯಂನಲ್ಲಿ ಗುರುವಾರ (ಜನವರಿ 31) ನಡೆದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳ ತಂಡಗಳ ನಡುವಣ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ನೇಪಾಳದ ಸಂದೀಪ್ ಜೋರ ವಿಶ್ವ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಸಂದೀಪ್ ಅರ್ಥಶತಕ ಬಾರಿಸಿದ್ದು ದಾಖಲೆಗೆ ಕಾರಣವಾಗಿದೆ.
ಗುರುವಾರ ಪಾದಾರ್ಪಣೆ ಪಂದ್ಯವನ್ನಾಡಿದ ಸಂದೀಪ್ 46 ಎಸೆತಗಳಿಗೆ 53 ರನ್ ಗಳಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅರ್ಧ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರ ಎಂಬ ದಾಖಲೆಯ ಹಿರಿಮೆಯನ್ನು ಸಂದೀಪ್‌ಗೆ ನೀಡಿದೆ. ಜೋರಗೆ ಈಗ 17 ವರ್ಷ 103 ದಿನ ವಯಸ್ಸು.
ಈ ಹಿಂದೆ ಇದೇ ದಾಖಲೆ ಕೆನಡಾದ ಹೀರಲ್ ಪಟೇಲ್ ಹೆಸರಿನಲ್ಲಿತ್ತು. 18 ವರ್ಷ 117 ದಿನ ವಯಸ್ಸಾಗಿದ್ದಾಗ ಪಟೇಲ್ ಈ ದಾಖಲೆ ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ 21 ರನ್ ಗೆಲುವನ್ನಾಚರಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಯುಎಇ, ಶೈಮಾನ್ ಅನ್ವರ್ 59, ಮುಹಮ್ಮದ್ ಉಸ್ಮಾನ್ 30 ರನ್ ನೆರವಿನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 153 ರನ್ ಸೇರಿಸಿತ್ತು. ನೇಪಾಳ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಶರಣಾಯಿತು.