
ಕರಾಚಿ, ಏಪ್ರಿಲ್ 14: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಆದಾಯ ನಷ್ಟದಿಂದ ಬಳಲುತ್ತಿದೆ ಆದರೆ ಪಿಸಿಬಿ ಉಳಿವಿಗೆ ಭಾರತದ ಅಗತ್ಯವೇನಿಲ್ಲ ಎಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಮಂಗಳವಾರ (ಏಪ್ರಿಲ್ 14) ಹೇಳಿದ್ದಾರೆ. ಇಂಡೋ-ಪಾಕ್ ಸರಣಿ ನಡೆಸುವ ಬಗ್ಗೆ ಪಾಕ್ ಕ್ರಿಕೆಟಿಗರು ಮತ್ತು ಭಾರತದ ಆಟಗಾರರ ನಡುವಿನ ಜಟಾಪಟಿಗೆ ಸಂಬಂಧಿಸಿ ಎಹ್ಸಾನ್ ಈ ಹೇಳಿಕೆ ನೀಡಿದ್ದಾರೆ.
ಬಿಸಿಸಿಐಯನ್ನು ವಿಶ್ವಾಸಾರ್ಹವಲ್ಲವೆಂದು ಪರಿಗಣಿಸಿರುವ ಎಹ್ಸಾನ್ ಮನಿ, ಬಹುಕಾಲದಿಂದ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಯದ ಹೊರತಾಗಿಯೂ ಪಾಕಿಸ್ತಾನ ಸಾಕಷ್ಟು ಶಕ್ತವಾಗಿದೆ. ಪಾಕ್ ಕ್ರಿಕೆಟ್ ಉಳಿಯಲು ಭಾರತ-ಪಾಕ್ ದ್ವಿಪಕ್ಷೀಯ ಸರಣಿ ನಡೆಯಲೇಬೇಕೆಂದೇನೂ ಇಲ್ಲ ಎಂದಿದ್ದಾರೆ.
'ಆದಾಯ ನಷ್ಟದಿಂದ ನಾವು ಸಮಸ್ಯೆಯಲ್ಲಿದ್ದೇವೆ. ಆದರೆ ನಮ್ಮ ಆದಾಯ ಸರಿಪಡಿಸಿಕೊಳ್ಳುವುದಕ್ಕಾಗಿ ನಾವು ಭಾರತದತ್ತ ಯೋಚಿಸಿಲ್ಲ. ಅವರ ಬಗ್ಗೆ ಯೋಚಿಸೋದು ಸರಿಬರೋಲ್ಲ. ಅವರ ನೆರವಿಲ್ಲದೆಯೂ ಪಿಸಿಬಿ ಉಳಿಯಬಲ್ಲದು,' ಎಂದು ಎಹ್ಸಾನ್ ಹೇಳಿದ್ದಾರೆ.
'ಭಾರತಕ್ಕೆ ನಮ್ಮ ಜೊತೆ ಆಡೋದು ಬೇಕಿಲ್ಲ ಅನ್ನೋದನ್ನು ನಾನು ಸ್ಪಷ್ಟವಾಗಿ ಹೇಳಬಲ್ಲೆ. ಹೀಗಾಗಿ ನಾವು ಅವರನ್ನು (ಭಾರತವನ್ನು) ಬಿಟ್ಟು ಯೋಚಿಸಬೇಕಾಗಿದೆ,' ಎಂದು ಮನಿ ನುಡಿದರು. ಇದಕ್ಕೂ ಮುನ್ನ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, ಇಂಡೋ-ಪಾಕ್ ಸರಣಿ ನಡೆದರೆ ನಮಗೆ ಸಹಾಯವಾಗಲಿದೆ ಎಂದಿದ್ದರು.
ಆದರೆ ಅಖ್ತರ್ ಸಲಹೆ ಭಾರತದ ಮಾಜಿ ನಾಯಕ ಕಪಿಲ್ ದೇವ್‌ಗೆ ಸರಿ ಕಂಡಿರಲಿಲ್ಲ, ಅವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಅದಾಗಿ ಪಾಕ್ ಆಲ್ ರೌಂಡರ್ ಶಾಹಿದ್ ಅಫ್ರಿದಿ ಕೂಡ ಕಪಿಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗೆ ಪ್ರತಿಕ್ರಿಯೆ ಎಂಬಂತೆ ಎಹ್ಸಾನ್ ಈ ಹೇಳಿಕೆ ನೀಡಿದ್ದಾರೆ.