
ದಕ್ಷಿಣ ಆಫ್ರಿಕಾ ಪರ ಡಿ ಕಾಕ್ ಇನ್ನು ಆಡಲ್ಲ ಎನ್ನುತ್ತಿವೆ ವರದಿಗಳು
ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಕಡ್ಡಾಯವಾಗಿ ಬೆಂಬಲವನ್ನು ಆಟಗಾರರು ನೀಡಬೇಕು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನೀಡಿದ ಸೂಚನೆಯನ್ನು ಕ್ವಿಂಟನ್ ಡಿ ಕಾಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದಾಗಿ ವಿಂಡೀಸ್ ವಿರುದ್ಧದ ಪಂದ್ಯದ ಆಡುವ ಬಳಗದಿಂದ ಡಿ ಕಾಕ್ ಹೊರಗುಳಿದಿದ್ದರು. ಈ ಬೆಳವಣಿಗೆಯ ನಂತರ ಕ್ವಿಂಟನ್ ಡಿಕಾಕ್ ಮುಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಈ ಬಾರಿಯ ವಿಶ್ವಕಪ್‌ನ ಪಂದ್ಯಗಳು ನಡೆಯುತ್ತಿರುವಂತೆಯೇ ಟೂರ್ನಿಯನ್ನು ಬಿಟ್ಟು ಹೊರ ನಡೆಯಲು ಡಿ ಕಾಕ್ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವರದಿಯನ್ನು ಕ್ರಿಕೆಟ್ ದಕ್ಷಿಣ ಆಪ್ರಿಕಾ ತಳ್ಳಿ ಹಾಕಿದೆ.

ಕ್ವಿಂಟನ್ ಡಿ ಕಾಕ್ ಇನ್ನೂ ನಮ್ಮ ತಂಡದ ಭಾಗ
ಕ್ವಿಂಟನ್ ಡಿ ಕಾಕ್ ಈ ಬಾರಿಯ ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ, ತವರಿಗೆ ವಾಪಾಸಾಗಲಿದ್ದಾರೆ ಎಂಬ ವರದಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸ್ಪಷ್ಟವಾಗಿ ನಿರಾಕರಿಸಿದೆ. ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ಇನ್ನು ಕೂಡ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿದ್ದಾರೆ. ತಂಡದ ಪ್ರಮುಖ ಸದಸ್ಯನಾಗಿ ಇದ್ದಾರೆ. ಅವರು ತವರಿಗೆ ಮರಳಿದ್ದಾರೆ ಎಂಬ ವರದಿಗಳು ಆಧಾರ ರಹಿತ ಎಂದು ಕ್ರಕೆಟ್ ದಕ್ಷಿಣ ಆಫ್ರಿಕಾ ತಿಳಿಸಿದೆ. ಉಳಿದ ಪಂದ್ಯಗಳಲ್ಲಿ ಅವರು ಭಾಗಿಯಾಗುವ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.

ಆಟಗಾರರಿಗೆ ದಿಗ್ಭ್ರಮೆಯಾಗಿದೆ
ಇನ್ನು ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಕ್ವಿಂಟನ್ ಡಿ ಕಾಕ್ ಆವರ ಈ ನಿಲುವು ಆಟಗಾರರಿಗೆ ದಿಗ್ಭ್ರಮೆಯುಂಟು ಮಾಡಿದೆ ಎಂದಿದ್ದರು. ಆದರೆ ಡಿ ಕಾಕ್ ಅವರ ಈ ನಿರ್ಧಾರವನ್ನು ತಾನು ಹಾಗೂ ತಂಡದ ಇತರ ಆಟಗಾರರು ಗೌರವಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಈ ಹಿಂದೆಯೂ ಮೊಣಕಾಲೂರಲು ವಿರೋಧಿಸಿದ್ದ ಡಿ ಕಾಕ್
ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರನಾಗಿರುವ ಕ್ವಿಂಟನ್ ಡಿ ಕಾಕ್ ಈ ಹಿಂದೆಯೂ ಮೊಣಕಾಲೂರಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲಿಸಲು ಒಪ್ಪಿರಲಿಲ್ಲ. ಈ ಬಗ್ಗೆ ಸೈಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್‌ನ ಸಂದರ್ಭದಲ್ಲಿ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಡಿಕಾಕ್ ಬಳಿ ಪತ್ರಕರ್ತರೊಬ್ಬರು ಕಾರಣವನ್ನು ಕೇಳಿದ್ದರು. ಈ ಸಂದರ್ಭದಲ್ಲಿ ಕ್ವಿಂಟನ್ ಡಿ ಕಾಕ್ ಕಾರಣವನ್ನು ನೀಡಲು ನಿರಾಕರಿಸಿದ್ದರೂ ತಮ್ಮ ನಿಲುವನ್ನು ಸಮರ್ಥನೆ ಮಾಡಿ ಪ್ರತಿಕ್ರಿಯಿಸಿದ್ದರು. ಈಗ ಈ ವಿಚಾರ ಮತ್ತಷ್ಟು ಗಂಭೀರವಾಗುವ ಸಾಧ್ಯತೆಗಳು ದಟ್ಟವಾಗಿದೆ. ವರ್ಣಭೇದದ ಕರಾಳ ಹಿನ್ನೆಲೆ ಹೊಂದಿರುವ ದಕ್ಷಿಣ ಆಫ್ರಿಕಾದ ಆಟಗಾರನೇ ಈ ರೀತಿಯ ನಿಲುವು ಹೊಂದಿರುವುದು ಅಲ್ಲಿನ ಕ್ರಿಕೆಟ್ ಮಂಡಳಿಗೂ ತೀವ್ರ ಮುಜುಗರವುಂಟು ಮಾಡಿದೆ.


Click it and Unblock the Notifications












