ಕತಾರ್‌ನಲ್ಲಿ ನಡೆಯುತ್ತಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಶುಕ್ರವಾರ, ಡಿಸೆಂಬರ್ 9ರಂದು ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಕ್ರೊಯೇಷಿಯಾ ಸೋಲಿಸಿತು.
ಈ ಆವೃತ್ತಿಯ ಫಿಫಾ ವಿಶ್ವಕಪ್ ಪಂದ್ಯದ ಅತ್ಯಂತ ನಾಟಕೀಯ ಅಂತ್ಯ ಕಂಡ ಈ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವು ಬ್ರೆಜಿಲ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿತು. 5 ಬಾರಿಯ ಚಾಂಪಿಯನ್ ಬ್ರೆಜಿಲ್ ಈ ಬಾರಿಯೂ ಫಿಫಾ ವಿಶ್ವಕಪ್ ಟ್ರೋಫಿ ಇಲ್ಲದೆ ಪಂದ್ಯಾವಳಿಯಿಂದ ಹೊರಬಿತ್ತು.
90 ನಿಮಿಷಗಳ ಅಂತ್ಯದಲ್ಲಿ ಪಂದ್ಯ ಗೋಲುರಹಿತವಾಗಿ ಉಳಿದ ನಂತರ, ಹೆಚ್ಚುವರಿ ಸಮಯದ ಮೊದಲಾರ್ಧದಲ್ಲಿ ನೇಮರ್ ಬ್ರೆಜಿಲ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಆದರೆ, ಕ್ರೊಯೇಷಿಯಾ ತಂಡದ ಬ್ರೂನೋ ಪೆಟ್ಕೊವಿಕ್ ಅವರು ಮೂರು ನಿಮಿಷಗಳು ಬಾಕಿ ಇರುವಾಗ ಗೋಲು ಬಾರಿಸಿ 1-1ರಲ್ಲಿ ಸಮಬಲಗೊಳಿಸಿದರು. ಅನಂತರ ಬ್ರೆಜಿಲ್‌ನ ಸಂಭ್ರಮವು ಹೆಚ್ಚು ಕಾಲ ಉಳಿಯಲಿಲ್ಲ.
ಇನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ರೊಡ್ರಿಗೊ ಬ್ರೆಜಿಲ್ ತಂಡಕ್ಕೆ ಬಂದಿದ್ದ ಮೊದಲ ಪೆನಾಲ್ಟಿಯನ್ನು ತಪ್ಪಿಸಿಕೊಂಡರು. ಕೊನೆಗೆ ಕ್ರೊಯೇಷಿಯಾ 4-2 ಅಂತರದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದುಕೊಂಡಿತು.