ಪ್ರೌಢತೆಯ ಆಟದಿಂದ ಗೆಲುವು ತಂದ ರೋಹಿತ್ ನಿಜಕ್ಕೂ ಗ್ರೇಟ್!

By ಆರ್ ಕೌಶಿಕ್, ಲಂಡನ್
Class and matured batting by Rohit Sharma against South Africa

ಸೌಥಂಪ್ಟನ್, ಜೂನ್ 6 : ಅದು ವಿಶ್ವಕಪ್ ಕ್ರಿಕೆಟ್-2019ರ ಭಾರತದ ಪ್ರಥಮ ಪಂದ್ಯ ದಿನ. ಆ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ಭಾರತದ ಎದುರಾಳಿ. ಮತ್ತಾವುದೋ ಪಂದ್ಯವಾಗಿದ್ದರೆ ಬಹುಶಃ ರೋಹಿತ್ ಶರ್ಮಾ ಡ್ರೆಸಿಂಗ್ ರೂಂನಲ್ಲಿ ಇದ್ದು ತನ್ನ ತಂಡದ ಆಟಗಾರರು ರನ್ ಚೇಸ್ ಮಾಡುವುದನ್ನು ನೋಡುತ್ತ ಕುಳಿತಿರಬಹುದಾಗಿತ್ತು. ಆದರೆ ಬುಧವಾರ ಜೂನ್ 5ರಂದು ನಡೆದ ಪಂದ್ಯದಲ್ಲಿ ರೋಹಿತ್ ಹಾಗೆ ಮಾಡುವಂತಿರಲಿಲ್ಲ.

ಒಂದು ಕಡೆ ದಕ್ಷಿಣ ಆಫ್ರಿಕಾ ಬೌಲರ್ ಕಾಗಿಸೊ ರಬಾಡಾ ಬೆಂಕಿ ಉಗುಳುತ್ತಿದ್ದರು. ಅವರು ಎಸೆಯುತ್ತಿದ್ದ ಒಂದೊಂದು ಎಸೆತಗಳೂ ಅತಿ ವೇಗದಲ್ಲಿ ಹಾರುತ್ತ ಬ್ಯಾಟ್ಸಮನ್ ಕಡೆಗೆ ಬರುತ್ತಿದ್ದವು. ಇಂಥ ಸಂದರ್ಭದಲ್ಲಿ ಕೇವಲ ಅನುಭವ ಹಾಗೂ ತಾಂತ್ರಿಕ ಕೌಶಲದಿಂದ ಬಹಳ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಿರಲಿಲ್ಲ. ಆದರೆ ಇಂಥ ಪರಿಸ್ಥಿತಿಯಲ್ಲಿ ಬ್ಯಾಟ್ ಹಿಡಿದು ರನ್ ಚೇಸ್ ಮಾಡಲು ಬಂದ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತೋರಿದ ಪ್ರಬುದ್ಧತೆ ಅಸಾಧಾರಣ.

ವಿಶ್ವಕಪ್ 2019: ರೋಹಿತ್ ಶರ್ಮಾ ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿ

ಸಿಕ್ಕ ಅವಕಾಶವನ್ನು ತುಂಬಾ ಸೂಕ್ತವಾಗಿ ಬಳಸಿಕೊಂಡ ರೋಹಿತ್ ಶರ್ಮಾ, ಅತಿ ಸಂಯಮದ ಆಟವಾಡಿ ಭಾರತವನ್ನು ಈ ವಿಶ್ವಕಪ್‌ನ ಪ್ರಥಮ ಪಂದ್ಯದಲ್ಲಿ ಗೆಲುವಿನ ದಡ ಮುಟ್ಟಿಸಿದ್ದು ಇತಿಹಾಸದಲ್ಲಿ ಮರೆಯದ ದಾಖಲೆಯಾಯಿತು. ದೃಢತೆ, ಸಂಯಮ, ಅನುಭವ, ಪ್ರೌಢಿಮೆ ಹೀಗೆ ಎಲ್ಲವನ್ನೂ ಮೇಳೈಸಿ ಆಟವಾಡಿದ ರೋಹಿತ್‌ಗೆ ಅದೃಷ್ಟ ಕೈ ಹಿಡಿದಿದ್ದು ಕೂಡ ಅಷ್ಟೇ ನಿಜ.

ಯುವಕ, ಬಿಸಿರಕ್ತದ ಬಲಗೈ ಬ್ಯಾಟ್ಸಮನ್ ರೋಹಿತ್ ಗೆ ತನ್ನತ್ತ ಬರುವ ಬಾಲ್‌ಗಳನ್ನು ಚಚ್ಚುವುದಷ್ಟೇ ಗೊತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ರೋಹಿತ್ ಕೇವಲ ಒಬ್ಬ ಬಿಸಿರಕ್ತದ ಆಟಗಾರನಾಗಿ ಮಾತ್ರವಲ್ಲದೆ, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ತಾನು ಗಟ್ಟಿಯಾಗಿ ನಿಂತು ತಂಡವನ್ನು ಗುರಿ ಮುಟ್ಟಿಸಬಲ್ಲೆ ಎಂಬ ಭರವಸೆಯನ್ನು ಕೋಟ್ಯಂತರ ಭಾರತೀಯರ ಹೃದಯದಲ್ಲಿ ಮೂಡಿಸಿದರು. ಕೇವಲ ರನ್ ಗಳಿಕೆ ಮಾತ್ರ ಚೇಸಿಂಗ್ ಅಲ್ಲ, ಆ ಸಂದರ್ಭದಲ್ಲಿ ಜವಾಬ್ದಾರಿಯುತ ಆಟಗಾರನಾಗಿ ಹೇಗೆ ಆಡಬೇಕೆಂಬುದನ್ನು ತೋರಿಸಿದರು.

ತಾಸಿಗೆ 90 ಮೈಲಿಗೂ ಅಧಿಕ ವೇಗದಲ್ಲಿ ತೂರಿ ಬರುವ ಬಾಲ್ ಅನ್ನು ಮನಸೋ ಇಚ್ಛೆ ಬಾರಿಸಿ ಬೌಂಡರಿಗೆ ಕಳಿಸಬೇಕೆನ್ನುವ ಉಮೇದಿ ಉಂಟಾಗುವುದು ಸಹಜ. ಆದರೆ ರೋಹಿತ್ ಅಂದು ಮಾತ್ರ ಹಾಗೆ ಮಾಡಲಿಲ್ಲ. ಸಿಡಿಲಬ್ಬರದ ಬ್ಯಾಟಿಂಗ್ ಬದಲಾಗಿ ವಿವೇಚನೆಯನ್ನೇ ಹೆಚ್ಚು ಬಳಸಿದರು. ತನ್ನೆಲ್ಲ ಆಕ್ರೋಶವನ್ನು ಅದುಮಿಕೊಂಡು ಟೀಂ ಇಂಡಿಯಾದ ಗೆಲುವಿಗೆ ಪಣ ತೊಟ್ಟು ಬ್ಯಾಟಿಂಗ್ ಮಾಡಿ ಗೆಲುವು ತಂದ ರೋಹಿತ್‌ಗೆ ಕೋಟ್ಯಂತರ ಭಾರತೀಯರ ನಮನಗಳು.

ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!

ಅಜೇಯ 122 ರನ್‌ಗಳ ಅವರ ಇನ್ನಿಂಗ್ಸ್ ಸಾಕಷ್ಟು ಏಳುಬೀಳುಗಳಿಂದ ಕೂಡಿತ್ತು. ಇನ್ನಿಂಗ್ಸ್ ಆರಂಭದಲ್ಲಿ ಗೊಂದಲ, ಹಿಂಜರಿಕೆ ಹಾಗೂ ಅನಿಶ್ಚಿತತೆ ಹೀಗೆ ಎಲ್ಲವೂ ಅವರನ್ನು ಕಾಡಿದವು. ಆದರೆ ಧೃತಿಗೆಡದೆ ಕ್ರೀಸ್‌ನಲ್ಲಿ ಸೆಟಲ್ ಆಗಲು ಸಮಯ ತೆಗೆದುಕೊಂಡ ಅವರು ಮುಂದೆ ಆಡಿದ ಆಟ ಅದ್ಭುತ. 100 ರನ್ ಪೂರೈಸಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದಾಗ ಭಾರತೀಯರ ಖುಷಿ ಮೇರೆ ಮೀರಿತ್ತು. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ರೋಹಿತ್ ಅವರ 23ನೇ ಶತಕದ ಆಟವಾಗಿದೆ.

23 ಶತಕಗಳೊಂದಿಗೆ ಈಗ ರೋಹಿತ್ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಶ್ರೇಷ್ಠ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ ಅವರಿಗಿಂತ ಒಂದು ಸ್ಥಾನ ಮುಂದಕ್ಕೆ ಹೋಗಿರುವ ರೋಹಿತ್, ಉನ್ನತ ಕ್ರಮಾಂಕದಲ್ಲಿರುವ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಗಿಂತ ಕೇವಲ ಎರಡು ಸ್ಥಾನ ಕೆಳಗಿದ್ದಾರೆ.

ವಿಶ್ವಕಪ್‌: IND vs SA, ಹಿಟ್‌ಮ್ಯಾನ್‌ ಶತಕ, ಭಾರತಕ್ಕೆ ಭರ್ಜರಿ ಜಯ

ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ ಟೀಂ ಇಂಡಿಯಾ ನಿಜವಾಗಿಯೂ ಸಾಕಷ್ಟು ಬಲಿಷ್ಠವಾಗಿದೆ. ತನ್ನೆಲ್ಲ ಜಡತ್ವವನ್ನು ಕೊಡವಿಕೊಂಡು ಮೇಲೆದ್ದ ಟೀಂ ಇಂಡಿಯಾ ನಿನ್ನೆ ಪ್ರದರ್ಶಿಸಿದ್ದು ನೈಜ ವೃತ್ತಿಪರ ಆಟ. ಅದಕ್ಕೆ ಪುಟವಿಟ್ಟಂತೆ ಆಡಿ ತೋರಿಸಿದ್ದು ರೋಹಿತ್.

ಒಂದು ಹಂತದಲ್ಲಿ ರೋಹಿತ್ ಅವರ ಕ್ಯಾಚ್ ಅನ್ನು ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಫಾಫ್ ಡುಪ್ಲೆಸಿ ಕೈಚೆಲ್ಲಿದ್ದು ಕೂಡ ಭಾರತಕ್ಕೆ ವರದಾನವಾಯಿತು. ರಬಾಡಾ ಎಸೆದ ಎಸೆತವೊಂದು ರೋಹಿತ್ ಬ್ಯಾಟಿಗೆ ತಾಗಿ ಎರಡನೇ ಸ್ಲಿಪ್ ಕಡೆಗೆ ಹಾರಿತ್ತು. ಇದನ್ನು ಹಿಡಿಯಲು ಫಾಫ್ ಡುಪ್ಲೆಸಿಸ್ ಡೈವ್ ಹೊಡೆದರಾದರೂ ಚೆಂಡು ಪೂರ್ತಿಯಾಗಿ ಕೈಗೆ ಸಿಗಲಿಲ್ಲ.

ನಿನ್ನೆಯ ಪಂದ್ಯದಲ್ಲಿ ಬಾಲ್‌ಗಳು ಎತ್ತ ಬೇಕತ್ತ ಹಾರಿ ಬರುತ್ತಿದ್ದವು. ಅದೆಷ್ಟೋ ಬಾರಿ ರೋಹಿತ್ ಮೈಗೆ ಬಾಲ್ ತಾಕಿದವು, ಇನ್ನೆಷ್ಟೋ ಬಾರಿ ಬೀಟ್ ಆದರು. ಇದೆಲ್ಲದರ ಮಧ್ಯೆ ಒಂಚೂರೂ ತಾಳ್ಮೆ ಕಳೆದುಕೊಳ್ಳದೆ, ಆಕ್ರೋಶದ ಹೊಡೆತಗಳಿಗೆ ಮುಂದಾಗದೆ ಆಟವಾಡಿದ ರೋಹಿತ್ ಗ್ರೇಟ್.

ಈ ಮುನ್ನ ರೋಹಿತ್ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಹೊಂದಿದ್ದಾರೆ. ಇದಲ್ಲದೆ ಇನ್ನೂ ಹಲವಾರು ಬಾರಿ ಶ್ರೇಷ್ಠ ಆಟವನ್ನು ಪ್ರದರ್ಶಿಸಿದ್ದಾರೆ. ಆದರೆ ಸಮಯ ಹಾಗೂ ಸಂದರ್ಭಗಳನ್ನು ನೋಡಿದರೆ ಸೌಥಂಪ್ಟನ್ ಪಂದ್ಯದಲ್ಲಿನ ಅವರ ಶತಕದಾಟ ಮಾತ್ರ ಇವೆಲ್ಲವನ್ನೂ ಮೀರಿ ನಿಲ್ಲುತ್ತದೆ.

ತನ್ನ ಮೆಚ್ಚಿನ ಆಟಗಾರ ರೋಹಿತ್‌ನ ಇದಕ್ಕಿಂತ ಬೆಸ್ಟ್ ಸೆಂಚುರಿ ನಾನು ಕಂಡಿಲ್ಲ ಎಂದು ಕೊಹ್ಲಿ ಪ್ರಶಂಸಿಸಿದ್ದು ಗಮನಾರ್ಹ. "ವಿಶ್ವಕಪ್‌ನ ಪ್ರಥಮ ಪಂದ್ಯದಲ್ಲಿನ ಒತ್ತಡವನ್ನು ಎದುರಿಸಿಯೂ ಶತಕ ಬಾರಿಸಿದ ರೋಹಿತ್‌ನ ಈ ಶತಕ ಆತನ ಎಲ್ಲ ಹಿಂದಿನ ಶತಕದಾಟಗಳಿಗಿಂತ ಶ್ರೇಷ್ಠ" ಎಂದು ಕ್ಯಾಪ್ಟನ್ ಕೊಹ್ಲಿ ಕೊಂಡಾಡಿದರು.

"ಆಟಗಾರನಾಗಿ ನನಗೆ ತಿಳಿದಿರುವಂತೆ, ಆ ರೀತಿ ವೇಗದಲ್ಲಿ ಬೌನ್ಸ್ ಎಸೆತಗಳು ಮುಖಕ್ಕೆ ರಾಚುತ್ತಿರುವಾಗ ಆತ್ಮವಿಶ್ವಾಸ ಒಗ್ಗೂಡಿಸಿಕೊಂಡು ತಾಳ್ಮೆಯಿಂದ ಕ್ರೀಸ್‌ನಲ್ಲಿ ನಿಲ್ಲುವುದು ತೀರಾ ಕಷ್ಟ. ಇಂಥ ಪರಿಸ್ಥಿತಿಗಳಲ್ಲಿ ಸಹಜವಾಗಿಯೇ ಬ್ಯಾಟ್ಸಮನ್‌ಗಳು ತಮಗೆ ತಿಳಿದಂತೆ ಬ್ಯಾಟ್ ಬೀಸಲಾರಂಭಿಸುತ್ತಾರೆ. ಆದರೆ ರೋಹಿತ್ ಆ ಸಂದರ್ಭದಲ್ಲಿ ತೀರಾ ದೃಢವಾಗಿದ್ದರು. ಈಗಾಗಲೇ ಸಾಕಷ್ಟು ಆಟವಾಡಿ ಅನುಭವ ಪಡೆದಿರುವ ರೋಹಿತ್‌ನಿಂದ ಮತ್ತಷ್ಟು ಪ್ರೌಢ ಇನ್ನಿಂಗ್ಸ್‌ಗಳನ್ನು ನಾನು ಎದುರು ನೋಡುತ್ತೇನೆ" ಎಂದಿದ್ದಾರೆ ಕೊಹ್ಲಿ.

ರೋಹಿತ್ ಅವರ ಇನ್ನಿಂಗ್ಸ್ ಅತ್ಯಂತ ನಾಜೂಕಿನಿಂದ ಹೆಣೆದ ಆಟವಾಗಿತ್ತು. ಆರಂಭದಲ್ಲಿ ಸಾಕಷ್ಟು ಮಿಸ್‌ಗಳಾದವು. ತಮ್ಮ ಇನ್ನಿಂಗ್ಸ್‌ನ 23ನೇ ಎಸೆತದವರೆಗೂ ಅವರು ಬೌಂಡರಿ ಬಾರಿಸಿರಲಿಲ್ಲ. 23ನೇ ಎಸೆತದಲ್ಲಿ ರಬಾಡಾ ಅವರ ಮಿಂಚಿನ ಬೌಲ್ ಒಂದನ್ನು ಲಾಂಗ್ ಲೆಗ್ ಬೌಂಡರಿಗೆ ಅಟ್ಟಿ ಮೊದಲ ಬೌಡರಿ ಗಳಿಸಿದರು.

ಆರಂಭದಲ್ಲಿ ಇಮ್ರಾನ್ ತಾಹೀರ್ ಹಾಗೂ ತಬ್ರೇಜ್ ಶಮ್ಸಿ ಅವರ ಬೌಲಿಂಗ್ ಎದುರಿಸಿದ ರೋಹಿತ್ 70 ಬಾಲ್‌ಗಳಲ್ಲಿ ಮೊದಲ 50 ರನ್ ಗಳಿಸಿದರು. ನಂತರ ಮತ್ತಷ್ಟು ದೃಢವಾದ ರೋಹಿತ್ ಮುಂದಿನ 50 ರನ್‌ಗಳನ್ನು 58 ಬಾಲ್‌ಗಳಲ್ಲಿಯೇ ತಂದುಕೊಂಡರು. ಇದಾದ ನಂತರ ಮತ್ತಷ್ಟು ಬ್ಯಾಟಿಂಗ್ ಮೊನಚು ಪಡೆದುಕೊಂಡ ಅವರು ಹಾರ್ದಿಕ್ ಪಾಂಡ್ಯ ಅವರ ಜೊತೆಯಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಟೀಂ ಇಂಡಿಯಾವನ್ನು ಗೆಲುವಿನ ಸನಿಹ ತಂದರು.

"ರೋಹಿತ್ ಔಟಾಗುತ್ತಾನೆ ಎಂದು ನಮಗೆ ಯಾವುದೇ ಕ್ಷಣದಲ್ಲಿಯೂ ಅನಿಸಲಿಲ್ಲ" ಎಂದು ಕೊಹ್ಲಿ ಹೇಳಿದ್ದು ಸತ್ಯವೇ ಆಗಿದೆ. "ಆಟದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಮತ್ತೊಂದು ಕಡೆ ಸಹ ಆಟಗಾರನಿಗೆ ಆಡಲು ಸಹಕರಿಸುತ್ತ, ಸಣ್ಣ ಸಣ್ಣ ಜೊತೆಯಾಟಗಳ ಮೂಲಕ ಇನ್ನಿಂಗ್ಸ್ ಕಟ್ಟಿದರು. ಯಾವುದೇ ಕ್ಷಣದಲ್ಲಿಯೂ ವಿಕೆಟ್ ಕಿತ್ತು ಹೋಗುವಂತೆ ಹಾರಿ ಬರುತ್ತಿದ್ದ ಬೌಲಿಂಗ್ ಮಧ್ಯೆಯೂ ಅಳುಕದೆ ಆಟವಾಡಿದ ರೋಹಿತ್ ಅವರ ಈ ಇನ್ನಿಂಗ್ಸ್ ಸಾರ್ವಕಾಲಿಕ ಶ್ರೇಷ್ಠವಾಗಿದೆ" ಎಂದು ರೋಹಿತ್ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ ಕ್ಯಾಪ್ಟನ್ ಕೊಹ್ಲಿ.

ಆರಂಭಿಕ ಪಂದ್ಯವನ್ನು ನೋಡಿದಲ್ಲಿ ಟೀಂ ಇಂಡಿಯಾ ಮೇಲೆ ಸಾಕಷ್ಟು ಭರವಸೆಯನ್ನು ಹೊಂದಬಹುದಾಗಿದ್ದು, ಎಲ್ಲ ಭಾರತೀಯರಿಗೂ ಸಂತಸದ ವಿಷಯವೇ ಆಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, June 6, 2019, 12:26 [IST]
Other articles published on Jun 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more