ಟಿ20 ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಲು ಬೇಕಾದ ಈ ಸಹಾಯ ಮಾಡುತ್ತೇವೆ ಎಂದ ಅಶ್ವಿನ್!

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾದ ಯೋಜನೆಯಂತೆ ಫಲಿತಾಂಶಗಳು ಲಭಿಸಿಲ್ಲ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಇತ್ತೀಚಿಗಷ್ಟೆ ಅಫ್ಘಾನಿಸ್ಥಾನ ಮತ್ತು ಸ್ಕಾಟ್ಲೆಂಡ್ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಸತತ 2 ಗೆಲುವುಗಳನ್ನು ಕಂಡಿದೆ. ಆದರೆ ಇದಕ್ಕೂ ಮುನ್ನ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲುವುದರ ಮೂಲಕ ಟೂರ್ನಿಯಲ್ಲಿ ಅತ್ಯಂತ ಕೆಟ್ಟ ಆರಂಭವನ್ನು ಪಡೆದುಕೊಂಡಿತ್ತು.
ಹೌದು, ಪಾಕಿಸ್ತಾನದ ವಿರುದ್ಧ ಆಡಿದ್ದ ಭಾರತ ಹೀನಾಯ ಸೋಲನ್ನು ಕಂಡಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಹಣಾಹಣಿಯ ಪಂದ್ಯವೊಂದರಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಸೋಲುಂಡಿತು. ಇದಾದ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ಸೋಲುವುದರ ಮೂಲಕ ಕಳೆದ 18 ವರ್ಷಗಳಿಂದ ಐಸಿಸಿ ಟೂರ್ನಿಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುತ್ತಿರುವ ತನ್ನ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರಿಸಿತು. ಹೀಗೆ ಪಾಕ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಅನುಭವಿಸಿದ ಪರಿಣಾಮ ಇದೀಗ ಸೆಮಿಫೈನಲ್ ಪ್ರವೇಶಿಸುವಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುವಂತಾಗಿದೆ.
ಹೀಗಾಗಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ಅಫ್ಘಾನಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತಾಗಿ ಟೀಮ್ ಇಂಡಿಯಾದ ಪ್ರಮುಖ ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಇತ್ತೀಚೆಗಷ್ಟೇ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಮುಗಿದ ನಂತರ ಮಾತನಾಡಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಲು ಟೀಮ್ ಇಂಡಿಯಾ ವತಿಯಿಂದ ಸಹಾಯ ಮಾಡುವುದಾಗಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಬೇಕಿದ್ದರೆ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡುತ್ತೇವೆ
"ಅಫ್ಘಾನಿಸ್ತಾನ ಉತ್ತಮ ಪ್ರದರ್ಶನ ನೀಡುತ್ತಿದ್ದು ಅವರ ಮೇಲೆ ಅನೇಕ ಭರವಸೆಗಳಿವೆ. ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಉತ್ತಮ ಪ್ರದರ್ಶನ ನೀಡಲಿ ಎಂದು ಆಶಿಸುತ್ತೇನೆ. ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ಗೆಲ್ಲಲು ಮುಜೀಬ್ ಉರ್ ರೆಹಮಾನ್ ಅಗತ್ಯತೆಯಿದ್ದು ಗಾಯದಿಂದ ಬಳಲುತ್ತಿರುವ ಅವರಿಗೆ ಬೇಕಿದ್ದರೆ ಟೀಮ್ ಇಂಡಿಯಾ ವತಿಯಿಂದ ವೈದ್ಯರನ್ನು ಕಳುಹಿಸಿ ಕೊಡುತ್ತೇವೆ. ಅದೊಂದೇ ನಾವು ಮಾಡಬಹುದಾದ ಸಹಾಯ, ಉಳಿದದ್ದು ನಮ್ಮ ಕೈಯಲ್ಲಿಲ್ಲ" ಎಂದು ರವಿಚಂದ್ರನ್ ಅಶ್ವಿನ್ ಹೇಳಿಕೆ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಲೇಬೇಕು!
ನವೆಂಬರ್ 7ರ ಭಾನುವಾರದಂದು ಮಧ್ಯಾಹ್ನ ವೇಳೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ವೀಕ್ಷಕರು ಮಾತ್ರವಲ್ಲದೇ ಟೀಮ್ ಇಂಡಿಯಾ ಅಭಿಮಾನಿಗಳು ಕೂಡ ದೊಡ್ಡ ಮಟ್ಟದಲ್ಲಿ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಜಯಗಳಿಸಿದರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಲಭಿಸಲಿದೆ. ಒಂದುವೇಳೆ ನ್ಯೂಜಿಲೆಂಡ್ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಆಡುವ ಮುನ್ನವೇ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಅಫ್ಘಾನ್ ಗೆಲ್ಲುವುದು ಮಾತ್ರವಲ್ಲ, ಟೀಮ್ ಇಂಡಿಯಾ ನಮೀಬಿಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು
ಹೌದು, ಇಂಡಿಯಾ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವುದು ಮಾತ್ರವಲ್ಲದೇ, ಸೋಮವಾರ ಟೀಮ್ ಇಂಡಿಯಾ ಮತ್ತು ನಮೀಬಿಯಾ ನಡುವೆ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಪಡೆ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾಗಿದೆ. ಹೀಗಾದರೆ ಮಾತ್ರ ಟೀಮ್ ಇಂಡಿಯಾ ದೊಡ್ಡ ನೆಟ್ ರನ್ ರೇಟ್ ಸಹಾಯದಿಂದ ಸೆಮಿಫೈನಲ್ ಪ್ರವೇಶಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications