ಕೆಎಲ್ ರಾಹುಲ್ ಅಮೋಘ ಶತಕ, ಉತ್ತರ ಪ್ರದೇಶ ತತ್ತರ

Posted By:

ಬೆಂಗಳೂರು, ಜ.29: ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯವಾಗಿ ಉಳಿದಿರುವ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ರಣಜಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಕೆಎಲ್ ರಾಹುಲ್ ಅಮೋಘ ಶತಕ ಬಾರಿಸಿ ನಾಟೌಟ್ ಆಗಿ ಉಳಿದು ಮೊದಲ ದಿನದ ಗೌರವ ದೊರೆಕಿಸಿಕೊಟ್ಟಿದ್ದಾರೆ.

ಸತತ ಗೆಲುವು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾ ಪಡೆದುಕೊಂಡ ಹಾಲಿ ಚಾಂಪಿಯನ್ ಕರ್ನಾಟಕ ಈಗ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಆಲ್ ರೌಂಡರ್ ಶ್ರೇಯಸ್ ಗೋಪಾಲ್ 88 ರನ್ ಗಳಿಸಿ ಆಡುತ್ತಿದ್ದರೆ, ಕೆಎಲ್ ರಾಹುಲ್ 150 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಐದನೇ ವಿಕೆಟ್ ಗೆ ಈ ಜೋಡಿ 178ರನ್ ಗಳಿಸಿ ಕರ್ನಾಟಕಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

KL Rahul hits unbeaten ton against Uttar Pradesh

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಕರ್ನಾಟಕದ 400ನೇ ರಣಜಿ ಪಂದ್ಯವಾಗಿರುವುದು ವಿಶೇಷ ತಮಿಳುನಾಡು ವಿರುದ್ಧ ಇದೇ ಮೈದಾನದಲ್ಲಿ ಆಡಿದ್ದ ವಿನಯ್ ಪಡೆ ಇನ್ನಿಂಗ್ಸ್ ಹಾಗೂ 257 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಈ ಋತುವಿನ ರಣಜಿ ಟೂರ್ನಿಯನ್ನು ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಂಡದ ಮೊತ್ತ 29 ರನ್ ಆಗಿದ್ದಾಗ ಮೊದಲ ವಿಕೆಟ್(ಸಮರ್ಥ್) ಕಳೆದುಕೊಂಡರೂ ಕೆಎಲ್ ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಜೋಡಿ ಸ್ಕೋರ್ ಹೆಚ್ಚಿಸಿತು. ರಾಬಿನ್ ಉತ್ತಪ್ಪ 41 ರನ್ ಗಳಿಸಿ ಅಲಿ ಮುರ್ತಜಾಗೆ ವಿಕೆಟ್ ಒಪ್ಪಿಸಿದರು.

ಉತ್ತಮವಾಗಿ ಆಡುತ್ತಿದ್ದ ಮನೀಶ್ ಪಾಂಡೆ 20 ರನ್ ಹೊಡೆದು ಪ್ರವೀಣ್ ಕುಮಾರ್ ಗೆ ಬಲಿಯಾದರೆ, ಕರುಣ್ ನಾಯರ್ ಖಾತೆ ತೆರೆಯಲೇ ಇಲ್ಲ. ನಂತರ ಶ್ರೇಯಸ್ ಹಾಗೂ ರಾಹುಲ್ ಜೋಡಿ ಕರ್ನಾಟಕದ ಉತ್ತಮ ಸ್ಕೋರ್ ಗಳಿಸುವಂತೆ ಮಾಡಿದರು. ರಾಹುಲ್ 22 ಬೌಂಡರಿ, 1 ಸಿಕ್ಸ್ ಸಿಡಿಸಿದರೆ, ಶ್ರೇಯಸ್ 15 ಬೌಂಡರಿ ಹೊಡೆದರು.

ಸಂಕ್ಷಿಪ್ತ ಸ್ಕೋರ್ : ಕರ್ನಾಟಕ 1ನೇ ಇನ್ನಿಂಗ್ಸ್ : 326/4, 90 ಓವರ್ಸ್ (ಕೆಎಲ್ ರಾಹುಲ್ 150*, ಶ್ರೇಯಸ್ ಗೋಪಾಲ್ 88*, ಪ್ರವೀಣ್ ಕುಮಾರ್ 3/34)

Story first published: Thursday, January 29, 2015, 18:51 [IST]
Other articles published on Jan 29, 2015
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ